Friday, March 8, 2019

ಮುಳ್ಳು ತುಳಿದು ಮುನ್ನಡೆಯುವವರು


ಸಿನಿಮಾ ಪ್ರಿಯರ ಭಾವ ಜಗತ್ತನ್ನಾಳುತ್ತದೆ ಸಿನಿಮಾ. ಬಾಲ್ಯ ಮತ್ತು ಹರೆಯದಲ್ಲಂತೂ ಅದು ಅನೇಕ ವಿಷಯಗಳನ್ನು ಮನದೊಳಗೆ ಎರಕ ಹುಯ್ದ ಪರಿ, ನಮ್ಮ ಕೆಲವು ಅನಿಸಿಕೆಗಳನ್ನು ಪರಾಮರ್ಶಿಸಿ ನೋಡಿಕೊಂಡಾಗ ಅರಿವಿಗೆ ಬರುತ್ತದೆ. ಸಿನಿಮಾದಲ್ಲಿನ ನಾಯಕ/ನಾಯಕಿಯರ ಪಾತ್ರಗಳ ನಡುವಳಿಕೆ, ಉಡುಗೆ ತೊಡುಗೆ ನಮ್ಮ ಇಷ್ಟಗಳಾಗುತ್ತವೆ. ಸಿನಿಮಾದಲ್ಲಿ ಅಭಿನಯಿಸುವವರು ದೇವಲೋಕದಿಂದ ಬಂದವರೆಂಬಂತೆ, ಅವರು ತುಂಬಾ ಅದೃಷ್ಟಶಾಲಿಗಳು, ತುಂಬಾ ಶ್ರೀಮಂತರು, ಕಾರಲ್ಲೇ ಓಡಾಡ್ತಾರೆ, ಹೂವಿನ ಹಾಸಿಗೆ ಮೇಲೆ ನಡೆದಾಡುತ್ತಾರೆ. ಅರಮನೆಯಂಥ ಮನೆಯಲ್ಲಿ ವಾಸಿಸುತ್ತಾರೆ ಎಂದು ಭಾವಿಸುತ್ತೇವೆ. ಅವರಂಥಾ ಸುಖಿಗಳು ಈ ಜಗತ್ತಲ್ಲೇ ಇಲ್ಲ ಎಂದುಕೊಳ್ಳುತ್ತೇವೆ, ಈ ಲೋಕವನ್ನು ಪ್ರವೇಶಿಸುವವರೆಗೂ. ಪ್ರೇಕ್ಷಕನಿಗೆ ಸಿನಿಮಾ ಎಂದರೆ ದಟ್ಟ ಆಕರ್ಷಣೆ.

ಯಾರ್ಯಾರೋ ಅರ್ಧಮರ್ಧ ಹೇಳಿದ ಮಾತುಗಳನ್ನು ಕೇಳಿ, ಸಿನಿಮಾದಲ್ಲಿ ನಟಿಸುವ ಹೆಣ್ಣುಮಕ್ಕಳು ಘಳಿಗೆಗೊಂದು ಬಟ್ಟೆ ಬದಲಿಸುತ್ತಾ, ಅಲಂಕಾರ ಮಾಡಿಕೊಂಡು, ಸ್ಟೈಲ್ ಆಗಿ ಒಂದೆರಡು ಡೈಲಾಗ್ ಹೇಳಿ, ಕುಣಿದು ಕುಪ್ಪಳಿಸಿ, ಕಣ್ಣಿಗೆ ಗ್ಲೀಸರಿನ್ ಹಚ್ಕೊಂಡು ನಾಲ್ಕಾರು ಕಣ್ಣೀರು ಉದುರಿಸಿ ರಾಶಿ ಹಣ ಬಾಚ್ಕೊಂಡು ಮನೆಗೆ ಮರಳುತ್ತಾರೆ. ಜೊತೆಗೆ ಜನಪ್ರಿಯತೆ, ಹೆಸರು, ಅವ್ರಿಗೇನ್ ಕಮ್ಮಿ! ಎಂದುಕೊಳ್ಳುತ್ತದೆ ಹೊರಗಿನ ಲೋಕ. ಕಾಸೆಸೆದ್ರೆ ಸಿನಿಮಾ ನಟಿಯರು ಹಾಸಿಗೆಗೆ ಬರ್ತಾರಂತೆ/ಬರ್ತಾರೆ ಎನ್ನುವ ಕೀಳು ಅಭಿಪ್ರಾಯವೂ ಇದೆ. ಇದು ಅರ್ಧ ಸತ್ಯ ಎಂದು ಬಿಡಿಸಿ ಹೇಳಲು ಹೋದರೆ ಕೇಳುವವರಿಗೆ ಕಟ್ಟುಕತೆ ಎಂಬಂತೆ ಭಾಸವಾಗುತ್ತದೆ.

ಹೇಗಿದೆ ಸಿನಿಮಾದ ಮಹಿಳಾ ಜಗತ್ತು?

ಚೆನ್ನಾಗಿದೆ. ಹೆಚ್ಚು ಚೆನ್ನಾಗಿಲ್ಲ. ಪ್ರತಿಭೆ ಇದ್ದು ಅವಕಾಶಗಳು ದೊರೆತಲ್ಲಿ ದೊಡ್ಡ ಮಟ್ಟದ ಹೆಸರಾಗುತ್ತದೆ. ಕೆಲಸದ ಬಗ್ಗೆ ತೃಪ್ತಿ ಇರುತ್ತದೆ. ಜನ ಗುರುತಿಸುತ್ತಾರೆ. ಪ್ರೀತಿ ತೋರುತ್ತಾರೆ. ಸಭೆ ಸಮಾರಂಭಗಳಿಗೆ ಕರೆದು ಸನ್ಮಾನಿಸುತ್ತಾರೆ. ಆ ಮೂಲಕ ಮನಸಿಗೊಂದಷ್ಟು ನೆಮ್ಮದಿ ದೊರೆಯುತ್ತದೆ. ಇದೇನು ಸಣ್ಣದ್ದಲ್ಲ, ಇದಿಷ್ಟನ್ನ ಹೇಳಿದರೆ ಚೆನ್ನಾಗಿದೆ ಎನ್ನುವ ವಿಭಾಗ ಮುಗಿದಂತೆ. ಆದ್ರೆ ಈ ಅದೃಷ್ಟ ಎಲ್ಲ ನಟಿಯರಿಗಿರುವುದಿಲ್ಲ.

ನಟಿ ಎಂದರೆ ನಾಯಕಿ ಪಾತ್ರ ಮಾಡುವವರು ಮಾತ್ರ ಅಲ್ಲ. ಅನೇಕ ಪೋಷಕ ಪಾತ್ರಗಳನ್ನು ನಿರ್ವಹಿಸುವವರೂ, ಜ್ಯೂನಿಯರ್ಸ್ ಅಥವಾ ಹಿಂದೆ ಹೇಳುತ್ತಿದ್ದಂತೆ ಎಕ್ಸ್ಟ್ರಾಗಳು ಎಂದು ಕರೆಸಿಕೊಳ್ಳುವ ಅನೇಕ ಮಹಿಳೆಯರೂ ನಟಿಯರೇ. ಅವರುಗಳಿಗೆ ಇಂಥ ಅವಕಾಶಗಳು ಅಪರೂಪ. ಜ್ಯೂನಿಯರ್ಸ್ ಗಂತೂ ಶೂಟಿಂಗ್ ಹೊತ್ತಲ್ಲಿ ಫ್ರೀ ಊಟ, ತಿಂಡಿ, ಕಾಫಿ ಸಿಗುತ್ತದೆ ಮತ್ತು ದೊರೆವ ಸಂಬಳ ಒಂದು ಹೊತ್ತಿನ ಊಟಕ್ಕಾದರೆ ಸಾಕು ಎನ್ನುವ ಸ್ಥಿತಿ.

ಇಲ್ಲಿ ಯಾವತ್ತೂ ಮಹಿಳೆಗೆ ಎರಡನೇ ದರ್ಜೆ. ಪ್ರಾರಂಭದಲ್ಲಿ ಚಿತ್ರರಂಗದ ಹೆಣ್ಣುಮಕ್ಕಳು ಎಂದರೆ ಕೇವಲ ನಟಿ ಅಥವಾ ಹಿನ್ನೆಲೆ ಗಾಯಕಿಯರಾಗಿರ್ತಿದ್ದ್ರು. ರಾಜಾಶ್ರಯ ದೊರೆತು, ಸತತ ಅಭ್ಯಾಸ ಮತ್ತು ಸಿದ್ಧ ಪಠ್ಯ ಹಾಗು ವಿಧಾನಗಳ ಕಲಿಕೆಯಿಂದಾಗಿ ಗಾಯನಕ್ಕೆ ಮತ್ತು ನಾಟ್ಯಕ್ಕೆ ಶಾಸ್ತ್ರೀಯ ಪಟ್ಟ ದೊರೆಯಿತು. ಅವೆರಡರಲ್ಲೂ ಸಾಧನೆ ಮಾಡಿದವರಿಗೆ ಸಿಗುವ ಗೌರವವನ್ನು ಹೋಲಿಸಿ ನೋಡಿದರೆ ನಟನಾವರ್ಗಕ್ಕೆ ಸಲ್ಲುವ ಗೌರವ ಕಡಿಮೆ. ನಟನೆಗಾಗಿ ಕೋರ್ಸುಗಳು ಶುರುವಾಗಿದ್ದು ಇತ್ತೀಚಿನ ೩೫-೪೦ ವರ್ಷಗಳ ಬೆಳವಣಿಗೆ. ಯಾವುದೇ ಅಕಾಡೆಮಿಕ್ ಕಲಿಕೆ ಇಲ್ಲದೇ ಕೇವಲ ಪ್ರತಿಭೆಯಿಂದ ಅದ್ಭುತ ನಟ, ನಟಿ ಅನಿಸಿಕೊಂಡವರು ಅನೇಕರಿದ್ದಾರೆ. ಮಿತಿಗಳನ್ನು ಮೀರಿ ಪರಕಾಯ ಪ್ರವೇಶ ಮಾಡುವುದೇ ನಟನೆಯಾದ್ದರಿಂದ ಅದು ನಾಲ್ಕು ಗೋಡೆಗಳ ಚೌಕಟ್ಟುಗಳನ್ನು ಮೀರಿದ ವಿದ್ಯೆ. ಇಂಥ ವಿದ್ಯೆಯ ಬಲ್ಲವರು ನಟ ನಟಿಯರು. ಆದರೂ ನಟಿಯೆಂದರೆ ಲೋಕ ನೋಡುವುದೇ ಬೇರೆ ಕಣ್ಣಿನಿಂದ.

ಚಿತ್ರರಂಗದಲ್ಲಿ ಪ್ರವೇಶಿಸಿದ ಎಷ್ಟೋ ದಶಕಗಳ ನಂತರ ಹೆಣ್ಣುಮಕ್ಕಳು ಉಳಿದ ವಿಭಾಗಗಳತ್ತ ಆಸಕ್ತಿವಹಿಸತೊಡಗಿದರು. ಆದರೂ ಇಂದಿಗೂ ಚಿತ್ರರಂಗದ ಹೆಣ್ಣುಮಕ್ಕಳು ಎಂದೊಡನೆಯೇ, ಮೊದಲು ಮಿದುಳು ಸಿಗ್ನಲ್ ಕೊಡುವುದು ನಟಿಯರೆಂದೇ. ನಿರ್ಮಾಣ, ನಿರ್ದೇಶನ, ಛಾಯಾಗ್ರಹಣ, ಎಡಿಟಿಂಗ್, ಸಂಗೀತ ಸಂಯೋಜನೆ, ನೃತ್ಯ ಸಂಯೋಜನೆ, ಚಿತ್ರಕತೆ, ಸಂಭಾಷಣೆ, ವಸ್ತ್ರಾಲಂಕಾರ, ಕೇಶ ವಿನ್ಯಾಸ ಹೀಗೆ ಅನೇಕ ವಿಭಾಗಗಳಲ್ಲಿ ಹೆಣ್ಣುಮಕ್ಕಳು ತಮ್ಮನ್ನು ತೊಡಗಿಸಿಕೊಂಡಿದ್ದಾರಾದರೂ, ಅವಕಾಶಗಳು ಈಗಲೂ ಕಡಿಮೆ. ಅದರಲ್ಲೂ ಛಾಯಾಗ್ರಹಣ ವಿಭಾಗದಲ್ಲಂತೂ ತೀರಾ ಬೆರಳೆಣಿಕೆಯ ಜನ ಮಹಿಳೆಯರಿದ್ದಾರೆ. ನೆನಪಿಸಿಕೊಂಡು ಹೆಸರು ಹೇಳಲು ಒಂದು ಹೆಸರೂ ಥಟ್ಟನೆ ನೆನಪಿಗೆ ಬರುವುದಿಲ್ಲ! ಒಮ್ಮೆ ನನಗೆ ಗೀತ ರಚನಾಕಾರ್ತಿಯರು ಎಷ್ಟು ಜನರಿದ್ದಾರೆ ನಮ್ಮ ಭಾರತೀಯ ಚಿತ್ರರಂಗದಲ್ಲಿ ಎನ್ನುವ ಕುತೂಹಲ ಉಂಟಾಗಿ, ಫೇಸ್‍ಬುಕ್ಕಿನಲ್ಲೊಂದು ಪೋಸ್ಟ್ ಹಾಕಿದ್ದೆ. ಗೀತರಚನೆಯನ್ನು ಮಾಡುತ್ತಿರುವವರು ಒಂದಿಷ್ಟು ಜನ ಇದ್ದಾರಾದರೂ ಅವರದ್ದ್ಯಾರದ್ದೂ ಜನ ಗುರುತಿಸುವಂಥ ದೊಡ್ದ ಹೆಸರಿಲ್ಲ ಗೀತ ರಚನಾಕಾರರಾಗಿ.

ಇತ್ತೀಚಿಗೆ ಎಲ್ಲ ವಿಭಾಗದಲ್ಲೂ ಮಹಿಳೆಯರೇ ಇರುವಂಥ, ಗಟ್ಟಿ ಕಥೆಗಳುಳ್ಳ ಧಾರಾವಾಹಿಯೊಂದನ್ನು ನಿರ್ಮಿಸಬೇಕು ಎನ್ನುವ ನನ್ನ ಯೋಜನೆಯನ್ನು, ನನ್ನ ಗೆಳತಿ, ಕಿರುತೆರೆ ನಟಿ ದೀಪಾ ರವಿಶಂಕರ್ ಅವರೊಂದಿಗೆ ಚರ್ಚಿಸುತ್ತಿದ್ದೆ. ಕ್ಯಾಮೆರಾ ವರ್ಕಿಗೆ ಹೆಣ್ಣುಮಕ್ಕಳ್ಯಾಕೆ ಹೆಚ್ಚು ಬರ್ತಿಲ್ಲ, ಹೆಗಲ ಮೇಲೆ ಕ್ಯಾಮೆರಾ ಹೊರುವ ಪ್ರಸಂಗ ಬಂದಲ್ಲಿ ಆಗೋದಿಲ್ಲ ಅಂತಲಾ ಎಂದಾಗ, ದೀಪಾ ಹೇಳಿದರು. “ಅದೆಲ್ಲ ಏನಿಲ್ಲ. ಆದ್ರೆ ಲೈಟ್ ಬಾಯ್ಸ್ ಮಾತು ಕೇಳಲ್ಲ ಜಯಾ. ಮನಸಿಗೆ ಬಂಧಂಗಾಡ್ತಾರೆ. ಹೆಣ್ಮಕ್ಕಳು ಬೈದ್ರೂ ಅವ್ರಿಗೆ ಹತ್ತಲ್ಲ. ಅದೇ ಗಂಡಸು, ತುಟಿ ನಾಲಿಗೆ ಕಚ್ಚಿ, ‘ಅಯ್ಯಾ ನಿನ್ನಯ್…’ ಅಂತ ಆವಾಜ್ ಹಾಕಿದ್ರೆ ಸಾಕು ಬಾಲ ಮುದರ್ಕೊಂಡು ಮಾತು ಕೇಳ್ತಾರೆ. ಇದನ್ನ ನನಗೆ ಹೇಳಿದ್ದೂ ಒಬ್ಬ ಕ್ಯಾಮೆರಾಮನ್‍ಯೇ” ಎಂದರು.

ಲೈಟ್ ಬಾಯ್ಸ್ ಅಥವಾ ಈಗ ಅನ್ನುವಂತೆ ಲೈಟ್ ಆಫೀಸರ್ಸ್, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕಲಿತಿರದ, ದೈಹಿಕ ಪರಿಶ್ರಮದ, ಬೆಳಕಿನ ನಿರ್ವಹಣೆಯ ಜವಾಬ್ದಾರಿಯ ತಾಂತ್ರಿಕ ವರ್ಗ. ಅವರುಗಳಿಂದ ಮೊದಲ್ಗೊಂಡು ನಿರ್ದೇಶಕ, ನಿರ್ಮಾಪಕರವರೆಗೆ ಚಿತ್ರರಂಗದಲ್ಲಿ ದುಡಿವ ಮಹಿಳೆ ಒಂದಲ್ಲ ಒಂದು ವಿಧದಲ್ಲಿ ಒಬ್ಬರಲ್ಲ ಒಬ್ಬರಿಂದ ಶೋಷಣೆಗೊಳಗಾಗ್ತಲೇ ಬಂದಿದಾಳೆ. ಈಗಿನ ತಲೆಮಾರಿನ ಹುಡುಗರ ಟೀಮಿನಲ್ಲಿ ಮೊದಲಿನಷ್ಟು ಶೋಷಣೆ ಕಂಡು ಬರುವುದಿಲ್ಲವಾದರೂ ಶೋಷಣೆ ನಿಂತಿಲ್ಲ ಎನ್ನುವುದಕ್ಕೆ ಇತ್ತೀಚಿನ ಲೈಂಗಿಕ ಕಿರುಕುಳದ ವಿರುದ್ಧದ ಆಂದೋಲನ Me Too ದಲ್ಲಿ ಕೇಳಿ ಬಂದ ದನಿಗಳೇ ಸಾಕ್ಷಿ!

ತರಾನಾ ಬರ್ಕ್ ಎನ್ನುವ ಅಮೇರಿಕಾದ ಸಾಮಾಜಿಕ ಹೋರಾಟಗಾರ್ತಿ, ೨೦೦೬ರಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ದ ಶುರು ಮಾಡಿದ Me Too ಹೆಸರಿನ ಆಂದೋಲನ ಭಾರತಕ್ಕೆ ಕಾಲಿಟ್ಟಿದ್ದು ೨೦೧೭ರ ಅಕ್ಟೋಬರ್‍ನಲ್ಲಿ. ಒಂದು ವರ್ಷದ ನಂತರ, ಚಿತ್ರರಂಗದ ನೊಂದ ಮಹಿಳೆಯರೂ ಒಬ್ಬರಾದ ಮೇಲೆ ಒಬ್ಬರಂತೆ ಅನೇಕರು ತಮ್ಮೊಂದಿಗಾದ ಲೈಂಗಿಕ ಕಿರುಕುಳವನ್ನು ಧೈರ್ಯದಿಂದ ಹೇಳಿಕೊಳ್ಳತೊಡಗಿದೊಡನೆಯೇ, ಆಂದೋಲನ ತೀವ್ರತೆ ಪಡೆದುಕೊಂಡು ದೊಡ್ಡ ಬಿರುಗಾಳಿಯನ್ನೇ ಸೃಷ್ಟಿ ಮಾಡಿತು. ಪುರುಷ ಪ್ರದಾನ ಸಮಾಜದ ಬೇರುಗಳು, ಎಲ್ಲಿ ಎಲ್ಲವೂ ಬುಡಮೇಲಾಗುವುದೋ ಎನ್ನುವ ಹೆದರಿಕೆಯಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿ ಮಾಡುತ್ತಾ ತಪ್ಪನ್ನೆಲ್ಲ ಪ್ರತಿಭಟಿಸುತ್ತಿರುವ ಹೆಣ್ಣುಮಕ್ಕಳ ತಲೆಗೇ ಕಟ್ಟಲು ನೋಡಿದವು. ಸಿಕ್ಕಿದ್ದೇ ಅವಕಾಶ ಎಂಬಂತೆ ಕ್ರಿಮಿಕೀಟಗಳಂಥವರು ದನಿ ಎತ್ತಿದ ನಟಿಯರನ್ನು ತುಂಬಾ ಕೀಳಾದ ಅವಾಚ್ಯ ಮಾತುಗಳಲ್ಲಿ, ಫೇಸ್‍ಬುಕ್, ಟ್ವಿಟ್ಟರುಗಳಲ್ಲಿ ಜರಿದು ತೃಪ್ತಿ ಹೆಮ್ಮೆ ಪಟ್ಟು, ತಮ್ಮ ಸಂಸ್ಕಾರವನ್ನು ಮೆರೆದರು! ಹಾಗೆ ದನಿಯೆತ್ತಿದ ಕನ್ನಡದ ನಟಿಯರಲ್ಲಿ ಸಂಗೀತಾ ಭಟ್ ಮೊದಲಿಗರಾದರೂ, ಅವರಿಗೆ ಸಾಕಪ್ಪಾ ಸಾಕು ಈ ಚಿತ್ರರಂಗದ ಸಹವಾಸ ಎನ್ನುವಂತೆ ಮಾಡಿ ಅಳಿಸಿಬಿಟ್ಟರು. ಬೆದರಿಕೆಗಳಿಗೆಲ್ಲ ಹೆದರದೇ ತಮ್ಮ ಮಾತಿಗೆ ಬದ್ಧರಾಗಿ ನಿಂತವರೆಂದರೆ ಶೃತಿ ಹರಿಹರನ್. ಕನ್ನಡ ಚಿತ್ರರಂಗದ ದಿಟ್ಟೆ ಮಹಿಳೆ ಆಕೆ. ಆಕೆಯಂತೆ ಕಿರುಕುಳ ಅನುಭವಿಸಿದ ಇತರ ನಟಿಯರು ಅವರ ಬೆಂಬಲಕ್ಕೆ ನಿಂತಿದ್ದರೆ ಕನ್ನಡ ಚಿತ್ರರಂಗದ ಭವಿಷ್ಯದ ಚಿತ್ರಣವೇ ಬೇರೆಯಾಗಿರೋದು. ಆದರೆ ಹಾಗಾಗಲಿಲ್ಲ. ಚಿತ್ರರಂಗದಲ್ಲಿ (ಯಾವುದೇ ಭಾಷೆಯದ್ದಾಗಿರಲಿ) ಲೈಂಗಿಕ ಕಿರುಕುಳ ಅದೆಷ್ಟು ಸಹಜವಾಗಿ ಹೋಗಿದೆ ಎಂದರೆ ಆಪಾದನೆಗೊಳಗಾದ ನಟ ಅರ್ಜುನ್ ಸರ್ಜಾರ ಪರವಾಗಿ ಅವರ ತಾಯಿ ಮಾಧ್ಯಮದವರೆದುರು ಮಾತನಾಡುತ್ತ, ಶೃತಿಯವರನ್ನು ಬೈಯುತ್ತಾ, “ಚಿತ್ರರಂಗಕ್ಕೆ ಎಷ್ಟೋ ಜನ ಹೆಣ್ಮಕ್ಳು ಬರ್ತಾರೆ. ಸಣ್ಣಪುಟ್ಟ ಕಿರುಕುಳ ಇದೆ, ಇಲ್ಲ ಅಂತ ಹೇಳ್ತಿಲ್ಲ ನಾನು. ಆದ್ರೆ ಅವ್ರೆಲ್ಲ ಮರ್ಯಾದೆಯಾಗಿ ಸುಮ್ನೆ ಹೋಗ್ತಿಲ್ವೆ ಈಗ? ಇವ್ಳೇನ್ ಮಹಾ ಇವಳ್ ಥರ ಬಂದ್ಬಿಟ್ಟು..” ಇತ್ಯಾದಿಯಾಗಿ ಆಡಿದ ಮಾತುಗಳೇ ಸಾಕು ಚಿತ್ರರಂಗದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಸಿಗುವ ಗೌರವದ ಬಗ್ಗೆ ಅರಿಯಲು. ಮೀ ಟೂ ಆಂದೋಲನಕ್ಕೂ ಮೊದಲೂ ಕೆಲವು ಹೆಣ್ಣುಮಕ್ಕಳು ತಮ್ಮೊಂದಿಗಾದ ಕಿರುಕುಳ ಮತ್ತು ಅನ್ಯಾಯದ ವಿರೋಧಿಸಿದ್ದು ಮಾಧ್ಯಮಗಳಲ್ಲಿ ನಾಲ್ಕಾರು ದಿನಗಳ ಸುದ್ದಿಗಳಾಗಿ ಮರೆಯಾಗಿವೆ. ನ್ಯಾಯ ಸಿಕ್ಕಿದ್ದು ಮಾತ್ರ ಇಲ್ಲಿಯವರೆಗೂ ಎಲ್ಲೂ ಕೇಳಿಲ್ಲ. ಇದನ್ನೆಲ್ಲ ಪ್ರಶ್ನಿಸಿ, ‘ಹಾಗಿದ್ದ್ರೆ ಸುಮ್ನೆ ಮನೇಲಿರಿ. ಇಲ್ಲಿಗ್ ಬಾ ಅಂದೋರ್ಯಾರು ನಿಮ್ಮನ್ನ?’ ಎನ್ನುವ ಧಾರ್ಷ್ಟ್ಯದ ಉತ್ತರ ಪಡೆದವರದೆಷ್ಟೋ ಜನ. ಅವಕಾಶಗಳು ಬೇಕಿದ್ದಲ್ಲಿ ಹೆಣ್ಣು ಸಹಿಸಿಕೊಂಡು ಸುಮ್ಮನಿರಬೇಕು ಎನ್ನುವುದು ಅಲ್ಲಿನ ಕೆಲವರ ಧೋರಣೆಯಾಗಿಬಿಟ್ಟಿದೆ. ಬದುಕಿನ ಸೂಕ್ಷ್ಮಗಳನ್ನು, ಮಾನವನ ಭಾವನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸುವಂಥ ಕ್ಷೇತ್ರದ ಕ್ರೌರ್ಯ ಇದು!

ತಾರತಮ್ಯ

ಸಮಾಜದಲ್ಲಿ ತಾರತಮ್ಯ ಎಷ್ಟೋ ಮಟ್ಟಿಗೆ ಕಮ್ಮಿಯಾಗಿದೆ. ಆದರೆ ಚಿತ್ರರಂಗದಲ್ಲಿ? ಊಟ, ಮೇಕಪ್‍ನಿಂದ ಮೊದಲ್ಗೊಂಡು ಸಂಭಾವನೆ, ನೋಡುವ, ಮಾತಾಡಿಸುವ ರೀತಿಯಲ್ಲೂ ವ್ಯತ್ಯಾಸಗಳು ನಿಚ್ಚಳವಾಗಿ ಕಾಣಿಸುತ್ತವೆ.

ವಯಸ್ಸು, ಅಂದ ಚೆಂದ

ಸಿನಿಮಾ ಕ್ಷೇತ್ರದಲ್ಲಿ ನಾಯಕ ನಟನಿಗೆ ಎಷ್ಟೇ ವಯಸ್ಸಾದರೂ, ಹೇಗೇ ಇದ್ದರೂ ಆತ ಹರೆಯದ ನಾಯಕ ನಟನಾಗಿಯೇ ಮುಂದುವರೆಯುತ್ತಾನೆ ಮತ್ತು ಆತನ ಎದುರಿಗೆ ನಾಯಕಿಯಾಗಿ ಅಭಿನಯಿಸುವ ಹೆಣ್ಣು ಸುಂದರಿಯಾಗಿದ್ದು ಹದಿಹರೆಯದವಳೇ ಆಗಿರಬೇಕು. ಹರೆಯದಲ್ಲಿ ನಾಯಕಿಯಾಗಿ ಜೊತೆಗೆ ನಟಿಸಿದ್ದ ಹೆಣ್ಣುಮಗಳು ಈಗ ನಾಯಕಿಯಾಗುವ ಹಾಗಿಲ್ಲ. ನಾಯಕಿಯಾದವಳಿಗೆ ಮದುವೆಯಾದರೆ ಸಾಕು, ನಾಯಕಿಯ ಪಟ್ಟದ ಕಿರಿಟ ಕಳಿಚಿಡಬೇಕು. ಒಂದೋ ಬಂದ ಪಾತ್ರಗಳನ್ನು ಒಪ್ಪಿಕೊಂಡು ಚಿತ್ರರಂಗದಲ್ಲಿ ಮುಂದುವರೆಯಬೇಕು ಇಲ್ಲವೇ ತೆರೆಮರೆಗೆ ಸರಿದುಬಿಡಬೇಕು. ಮಹಿಳಾ ಪ್ರಧಾನ ಚಿತ್ರಗಳು ಬಂದಲ್ಲಿ ಒಂದಿಷ್ಟು ನಾಯಕಿಯಾಗುವ ಅವಕಾಶವಿರುತ್ತದೆ. ಆದರೆ ಅಂಥ ಚಿತ್ರಗಳೇ ಬರುವುದು ಕಡಿಮೆ ಅಲ್ಲವೆ! ಈಗಿನ ಜನರೇಶನ್ನಿನ ನಾಯಕ ನಟ ನಟಿಯರಾದರೂ ಈ ದರಿದ್ರ ಪರಂಪರೆಯನ್ನು ಮುರಿದು, ತಮ್ಮ ವಯಸ್ಸಿಗೆ, ಪಾತ್ರಕ್ಕೆ ತಕ್ಕ ಸಹ ಕಲಾವಿದರೊಡನೆ ನಟಿಸುವಂತಾಗಬೇಕು.

ಸಂಭಾವನೆ


ಎರಡು ವರ್ಷಗಳ ಹಿಂದೆ ಟಿವಿ ಚಾನಲ್ ಸಂದರ್ಶನ ಒಂದರಲ್ಲಿ, ಕನ್ನಡ ಚಿತ್ರರಂಗದ ನಾಯಕಿಯರಲ್ಲಿ ಒಬ್ಬರಾದ ಐಂದ್ರಿತಾ ರೇ ಅವರು, ‘ನಾಯಕ ನಟರಿಗೆ ಐವತ್ತು ಲಕ್ಷ, ಒಂದು ಕೋಟಿ ಸಂಭಾವನೆಯಾದರೆ ನಮಗೆಲ್ಲ ಐದು ಲಕ್ಷಕ್ಕೆ ಮೀರಿ ಯಾರೂ ಸಂಭಾವನೆ ಕೊಡುವುದಿಲ್ಲ. ನಾವೂ ಅವರಷ್ಟೇ ಶ್ರದ್ಧೆ ಮತ್ತು ಶ್ರಮವಹಿಸಿ ಸಮಸಮಕ್ಕೆ ಕೆಲಸ ಮಾಡ್ತೀವಿ. ಆದ್ರೆ ಸಂಭಾವನೆ ಮಾತ್ರ ಕಡಿಮೆ. ಈ ತಾರತಮ್ಯ ನಿಲ್ಲಬೇಕು’ ಎನ್ನುವ ಮಾತುಗಳನ್ನಾಡಿದ್ದು ಕೆಲವರಿಗಾದ್ರು ನೆನಪಿರಬೇಕು. ಐಂದ್ರಿತಾ ರೇ ಅವರ ಮಾತಿಗೆ ಆಗ ಇನ್ನೊಂದಿಬ್ಬರು ನಾಯಕಿಯರೂ ದನಿಗೂಡಿಸಿದಂತೆ ನೆನಪು. ಅದೊಂದು ದೊಡ್ಡ ಸುದ್ದಿಯಾದಷ್ಟೇ ವೇಗವಾಗಿ ಅದರ ಸದ್ದೂ ಅಡಗಿತ್ತು. ಸರಿಯಾಗಿ ಅದದೇ ಪದಗಳನ್ನಿಲ್ಲಿ ದಾಖಲಿಸಲೆಂದು, ಆ ವಿಡಿಯೊ ಗೂಗಲಿನಲ್ಲಿ ಸಿಗಬಹುದೇನೋ ಎಂದು ಹುಡುಕಲು ಹೋದೆ. ಸಿಗಲಿಲ್ಲ. ಬದಲಿಗೆ ಅಂತರ್ಜಾಲ ಪತ್ರಿಕೆಯೊಂದರ ಗಾಸಿಪ್ ಕಾಲಮ್ಮಿನಲ್ಲಿ, ಕನ್ನಡದಲ್ಲಿ ಹೆಚ್ಚು ಸಂಭಾವನೆ ಪಡೆವ ಐದು ಜನ ನಟಿಯರ ವಿವರಗಳಲ್ಲಿ ಅವರ ವಯಸ್ಸಿನ ವಿವರ, ಜನ್ಮ ದಿನಾಂಕ ಸಮೇತ ಇತ್ತು! ಅಲ್ಲಿ ಅವರುಗಳ ಜನ್ಮ ದಿನಾಂಕವನ್ನು ನಮೂದಿಸಬೇಕಾದ ಅವಶ್ಯಕತೆ ಏನಿತ್ತು? ಅದರಿಂದ ಆ ಪತ್ರಿಕೆ ಏನನ್ನು ಹೇಳ ಬಯಸಿತ್ತು? ನಟಿಯೊಬ್ಬಳ ಸಂಭಾವನೆಗೂ ಆಕೆ ಪ್ರತಿಭೆಗೂ ಹೋಲಿಸಿ ನೋಡಿದರೆ ಸೈ. ಆದರೆ ಅಲ್ಲಿ ವಯಸ್ಸ್ಯಾಕೆ ಬಂತು?

ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕರ ಸಮಕ್ಕೆ ಸಂಭಾವನೆ ಕೊಟ್ಟಲ್ಲಿ ಮಾತ್ರ ತಾನು ನಟಿಸುವ ಶರತ್ತು ವಿಧಿಸಿ, ಗೆದ್ದವರು ಬಾಲಿವುಡ್ ನಟಿ ದೀಪಿಕಾ ಪಡಕೋಣೆ. ಇದೀಗ ಅವರ ಸಂಭಾವನೆ ಅಲ್ಲಿನ ನಾಯಕ ನಟರ ಸಂಭಾವನೆಗಿಂತಲೂ ಹೆಚ್ಚು ಎನ್ನುವ ಸುದ್ದಿಯಿದೆ. ಕೇಳಿ ಖುಷಿಯಾಗುತ್ತದೆ, ಇಷ್ಟು ವರ್ಷಗಳ ಶೋಷಣೆಯ ಎದುರು ಈ ರೀತಿ ಖುಷಿಪಡಲು ಮನಸು ಹಿಂಜರಿಯುತ್ತಿಲ್ಲ. ಆ ನಂತರ ಕಂಗನಾ ರನೌತ್ ಸಹ ಇದೇ ರೀತಿಯಲ್ಲಿ ಡಿಮ್ಯಾಂಡ್ ಮಾಡಿದವರು. ಸ್ಕಾರ್ಲೆಟ್ ಜಾಹನ್ಸನ್, ಜನ್ನಿಫರ್ ಲಾರೆನ್ಸ್ ಹಾಗು ಇನ್ನಿಬ್ಬರು ಹಾಲಿವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು.

ಇವರೆಲ್ಲರನ್ನು ಎಣಿಸಿ ಕೂಡಿಸಿದರೂ ಹೀಗೆ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಂಖ್ಯೆ ನಟರ ೧೦%ರಷ್ಟೂ ಆಗುವುದಿಲ್ಲ! ಆದರೂ ಇಂಥದ್ದೊಂದು ದಿಟ್ಟ ನಿರ್ಧಾರದ ಮೂಲಕ, ಅಸಮಾನತೆಯ ಮುಳ್ಳುಗಳನ್ನು ಕಿತ್ತೆಸೆಯುತ್ತಾ ಮುನ್ನೆಡೆದು ದಾರಿ ಹಸನು ಮಾಡುತ್ತಿರುವ ಈ ಗಟ್ಟಿ ಹೆಣ್ಣುಮಕ್ಕಳನ್ನು ಅಭಿನಂದಿಸಬೇಕು ಎನಿಸುತ್ತದೆ. ‘ಅವೆಂಜರ್ಸ್: ಇನ್ಫಿನಿಟಿ ವಾರ್’ ಸಿನಿಮಾದ ಖ್ಯಾತಿಯ ಹಾಲಿವುಡ್ ನಟ ಬೆನಡಕ್ಟ್ ಕಂಬರ್‍ಬ್ಯಾಚ್, ಕಳೆದ ವರ್ಷ ತನ್ನ ಕೋ-ಸ್ಟಾರ್‍ ನಟಿಗೆ ತನ್ನ ಸಮಕ್ಕೆ ಸಂಭಾವನೆ ಕೊಟ್ಟಲ್ಲಿ ಮಾತ್ರ ತಾನು ಚಿತ್ರದಲ್ಲಿ ನಟಿಸುವುದು ಎನ್ನುವ ಹೇಳಿಕೆ ನೀಡುವ ಮೂಲಕ ಇತರ ನಟರಿಗೆ ಮಾದರಿಯಾಗಿದ್ದಾರೆ. ಇವೆಲ್ಲ ಲಕ್ಷ ಕೋಟಿಗಳ ಮಾತಾಯ್ತು. ಜ್ಯೂನಿಯರ್ ಆರ್ಟಿಸ್ಟುಗಳ ಸಂಭಾವನೆ ಎಷ್ಟಿರಬಹುದು ಊಹಿಸಬಲ್ಲಿರಾ? ದಿನವೊಂದಕ್ಕೆ ಗಂಡಸರಿಗೆ ೫೦೦ ರೂಪಾಯಿಗಳಾದರೆ ಮಹಿಳೆಗೆ ೩೦೦ ತಪ್ಪಿದರೆ ೪೦೦ ಅಷ್ಟೆ.

ನಿರ್ಮಾಣ - ನಿರ್ದೇಶನ

ಭಾರತದಲ್ಲಿ ಎಲ್ಲ ಭಾಷೆಗಳನ್ನು ಒಟ್ಟುಗೂಡಿಸಿದರೆ ಸಧ್ಯಕ್ಕೆ ಎಪ್ಪತ್ತಕ್ಕೂ ಹೆಚ್ಚು ಜನ ಚಲನಚಿತ್ರ ನಿರ್ದೇಶಕಿಯರಿದ್ದಾರೆ. ಅವರಲ್ಲಿ ಸತತವಾಗಿ ನಿರ್ದೇಶನದಲ್ಲಿ ತೊಡಗಿರುವವರು ಮಾತ್ರ ಮತ್ತೆ ಬೆರಳೆಣಿಕೆಯಷ್ಟೇ ಮಹಿಳೆಯರು. ಹೆಸರಾಂತ ನಿರ್ದೇಶಕರಿಗೆ ಸಿಗುವಷ್ಟು ಸುಲಭದಲ್ಲಿ ನಿರ್ಮಾಪಕರು ಹೆಸರಾಂತ ನಿರ್ದೇಶಕಿಯರಿಗೆ ಸಿಗುವುದಿಲ್ಲ ಅನ್ನುವುದು ವಾಸ್ತವ. ಇನ್ನು ಅನೇಕ ನಿರ್ಮಾಪಕಿಯರ ಹೆಸರಲ್ಲಿ ಸಿನಿಮಾಗಳು ಬಿಡುಗಡೆಯಾದರೂ ಹಣ ಹೂಡುವವರು ಮತ್ತು ಅದರ ನಿರ್ವಹಣೆಯನ್ನು ಮಾಡುವುದು ನಿರ್ಮಾಪಕಿಯರ ಗಂಡಂದಿರೇ. ಎಲೆಕ್ಷನ್ನಲ್ಲಿ ನಾಮ್ ಕೆ ವಾಸ್ತೆ ಹೆಂಡತಿಯನ್ನು ಕಾರ್ಪೋರೇಟರ್ ಸ್ಥಾನದಲ್ಲಿ ನಿಲ್ಲಿಸಿ, ಗೆದ್ದ ಮೇಲೆ ಅವರ ಗಂಡಂದಿರು ಆಡಳಿತ ನಡೆಸುವುದಿಲ್ಲವೇ? ಹಾಗೆಯೇ ಇಲ್ಲೂ ಸಹ. ದಿ. ಪಾರ್ವತಮ್ಮ ರಾಜಕುಮಾರ್ ಥರದವರು, ಕೆಲವು ದಿನಗಳ ಹಿಂದೆ ನಿಧನರಾದ ಜಯಶ್ರೀದೇವಿಯಂಥವರು, ಶೈಲಜಾ ನಾಗ್‍ರಂಥವರು ತಾವೇ ಮುಂದಾಗಿ ನಿಂತು ಸಿನಿಮಾ ನಿರ್ಮಿಸುವವರು ವಿರಳ.

ಚಿತ್ರಕಥೆ - ಸಂಭಾಷಣೆ

ಬರೆಯುವ ಮಹಿಳೆಯರ ಸಂಖ್ಯೆ ಇಲ್ಲೂ ಕಮ್ಮಿಯೇ. ಎಷ್ಟೋ ಜನಕ್ಕೆಸಿನಿಮಾ ಎಂಬ ಉದ್ಯಮದಲ್ಲಿ ಎಷ್ಟೆಲ್ಲ ರೀತಿಯ ಉದ್ಯೋಗ ಅವಕಾಶಗಳಿವೆ ಎನ್ನುವುದೇ ಗೊತ್ತಿರುವುದಿಲ್ಲ. ಇಲ್ಲಿಯ ಕೆಲಸ ಪರ್ಮನಂಟ್ ಅಲ್ಲವಾದ್ದರಿಂದ, ಮನರಂಜನೆಯ ಹೊರತಾಗಿ ಇತ್ತ ಜನರ ಗಮನವೂ ಕಮ್ಮಿ.

ಇನ್ನು ಬಹುತೇಕ ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ಸಂಭಾಷಣೆ ಹಾಗು ಚಿತ್ರಕತೆಯಲ್ಲಿ ಅವುಗಳ ಮಹತ್ವವೆಷ್ಟು ಅನ್ನೋದನ್ನ ನಾವೆಲ್ಲ ನೋಡಿಯೇ ಇದ್ದೇವೆ. ನಾಯಕಿ ಪಾತ್ರವಾದರೂ ಆಕೆ ಅಬಲೆಯಾಗಿರ್ತಾಳೆ, ಪಾಪದವಳಾಗಿರ್ತಾಳೆ. ಅವಳ ರಕ್ಷಣೆಗೆಂದೇ ನಾಯಕ ಇರೋದು. ಅವಳಿಗೆ ನಾಯಕನ ಹೊರತಾಗಿ ಬೇರೆ ಕನಸುಗಳೇ ಇರಲ್ಲ ಬದುಕಿನಲ್ಲಿ! ನಾಯಕಿಯದೇ ಈ ಹಣೆಬರಹ ಅಂದ ಮೇಲೆ ಇನ್ನು ಪೋಷಕ ಪಾತ್ರಗಳ ಪೋಷಣೆ ಕೇಳಬೇಕೆ?! ಕಮರ್ಷಿಯಲ್ ಸಿನಿಮಾ ಅಂದರೆ ಒಂದು ಐಟಮ್ ಸಾಂಗ್, ಒಂದು ರೇಪ್ ಇರಲೇಬೇಕು. ಹೆಣ್ಣಿನ ದೇಹಸಿರಿಯೇ ಆಕೆಯ ಪ್ರತಿಭೆ ಎಂದು ಭಾವಿಸಿ ಪಾತ್ರ ಸೃಷ್ಠಿಸುವವರ ಸಂಖ್ಯೆ ದೊಡ್ಡದಾಗೇ ಇದೆ. ನಾನು ೨೦೧೫-೨೦೧೭ರ ಅವಧಿಗೆ ಭಾರತೀಯ ಚಲನಚಿತ್ರ ಸೆನ್ಸರ್ ಮಂಡಳಿಯ ಪ್ಯಾನಲ್ ಮೇಂಬರ್ ಆಗಿದ್ದೆ. ಆಗ ನೋಡಿದ ಎಷ್ಟೋ ಚಿತ್ರಗಳು ಬಿಡುಗಡೆಗೂ ಲಾಯಕ್ಕಿಲ್ಲದೆ ಡಬ್ಬಿಯಲ್ಲೇ ಕೊಳೆಯುವಂಥವು. ಸಧ್ಯ ಅವುಗಳಿಗೆ ಬಿಡುಗಡೆ ಭಾಗ್ಯ ಸಿಗದೆ ಇರುವುದು ಪ್ರೇಕ್ಷಕರ ಪುಣ್ಯ! ಅವುಗಳಲ್ಲಂತೂ ಹೆಣ್ಣೆಂದರೆ ಭೋಗದ ವಸ್ತುವಲ್ಲದೇ ಮತ್ತೇನಲ್ಲ. ಇನ್ನು ಹೆಂಗಸರ ಮೇಲಿನ ಬೈಗುಳಗಳೋ ಅವುಗಳನ್ನು ಕೇಳಿದವರ ಕಿವಿ ಬಿಡಿ ಜನ್ಮವೇ ಪಾವನವಾಗುತ್ತದೆ! ಮಹಿಳಾ ಪ್ರಧಾನ ಚಿತ್ರಗಳಲ್ಲಿನ ಸಂಭಾಷಣೆ, ದೃಶ್ಯಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟು, ಹೆಣ್ಣಿನ ಶೋಷಣೆಯ ವಿರುದ್ಧ, ಆಕೆಯ ಪರವಾಗಿ ಯೋಚಿಸಿ ಸಿನಿಮಾ ಮಾಡಿದವರ ಕುರಿತು ಗೌರವ ಮೂಡುತ್ತದೆ. ಹಾಗೆ ಸೂಕ್ಷ್ಮವಾಗಿ ಯೋಚಿಸುವವರ ಹೊರತಾಗಿ, ಮೇಲ್ಮಾತಿಗೆ ನಯವಾಗಿ ಮಾತಾಡುತ್ತಾ, ಸೆಟ್ಟಲ್ಲಿ ಹಗುರವಾಗಿ ಮಾತಾಡುವ, ನಡೆದುಕೊಳ್ಳುವ, ಅವಮಾನಿಸುವ ಜನರೂ ಇದ್ದಾರೆ.

ಇಷ್ಟೆಲ್ಲ ಬರೀ ನಕಾರಾತ್ಮಕಗಳ ಸುರುಳಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಅಂದ ಮೇಲೆ ಹೆಣ್ಣುಮಕ್ಕಳು ಯಾಕೆ ಈ ಕ್ಷೇತ್ರಕ್ಕೆ ಬರಬೇಕು? ಯಾಕೆಂದರೆ ಮೊಟ್ಟ ಮೊದಲನೇಯದಾಗಿ ಹೆಣ್ಣಿಗೂ ತನಗೆ ಬೇಕು ಬೇಡವಾದುದನ್ನು ನಿರ್ಧರಿಸುವ ಹಕ್ಕಿದೆಯಾದ್ದರಿಂದ ಅದು ಆಕೆಯ ಇಷ್ಟ. ಚಿತ್ರರಂಗ ಆಕೆಯಲ್ಲಿನ ಪ್ರತಿಭೆಯ ತಾಣವಾದ್ದರಿಂದ ಆಕೆಯ ಹಕ್ಕು ಅದು. ಎರಡನೇಯದಾಗಿ, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವ, ಸಮನಾಗಿ ನಡೆಸಿಕೊಳ್ಳುವ ನಿರ್ದೇಶಕರು, ನಿರ್ಮಾಪಕರು, ನಟರೂ ಇದ್ದಾರೆ. ಇದನ್ನು ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿರುವೆ. ನಾನು ನಟಿಸಿದ್ದು ಆರೇಳು ಚಿತ್ರಗಳಲ್ಲೇ ಆದರೂ ಕೆಟ್ಟ ಮತ್ತು ಒಳ್ಳೆಯ ಅನುಭವಗಳೆರಡೂ ಆಗಿವೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಸಭ್ಯರಾಗಿದ್ದಲ್ಲಿ ಇಡೀ ಚಿತ್ರ ತಂಡ ಹೆಣ್ಣುಮಕ್ಕಳೊಡನೆ ಹಾಗು ಇತರರೊಡನೆ ಸಭ್ಯತೆಯಿಂದಲೇ ವರ್ತಿಸುತ್ತದೆ. ಅಲ್ಲೊಂದು ಶಿಸ್ತು ಮತ್ತು ಪ್ರಸನ್ನತೆ ಎದ್ದು ಕಾಣುತ್ತಿರುತ್ತದೆ. ಅಂಥ ವಾತಾವರಣದಲ್ಲಿ ನಟಿಸುವುದು ಅದೆಂಥ ನೆಮ್ಮದಿ ಎಂದರೆ ಈ ತಾರತಮ್ಯಗಳೆಲ್ಲ ಸುಳ್ಳು ಅನಿಸುವಷ್ಟು!

ಏನು ಮಾಡಬೇಕು?

ಚಿತ್ರರಂಗದಲ್ಲಿ ಮಹಿಳೆ ಯಾವುದೇ ವಿಭಾಗದಲ್ಲಿ ಕೆಲಸ ಮಾಡಿದರೂ, ತನ್ನೊಡನೆ ಆಗುವ ಅನ್ಯಾಯವನ್ನು ವಿರೋಧಿಸುವುದನ್ನು ಮೊದಲು ಕಲಿಯಬೇಕಿದೆ. ಆದರೆ ಎಷ್ಟೋ ಜನ ಹೆಣ್ಣುಮಕ್ಕಳು ಅವಕಾಶ ತಪ್ಪಿ ಹೋಗುವ ಭಯದಲ್ಲಿ, ಕೆಲಸ ಕಳೆದುಕೊಂಡರೆ ಮನೆಯ ಒಪ್ಪೊತ್ತಿನ ಗಂಜಿಗೆ ಕಲ್ಲುಬಿದ್ದೀತು ಎನ್ನುವ ಅನಿವಾರ್ಯತೆಯಿಂದ ಸುಮ್ಮನೆ ಕಣ್ಣೀರಿಡುತ್ತಾ ಕಿರುಕುಳಗಳನ್ನು ಸಹಿಸಿಕೊಳ್ಳುತ್ತಾರೆ ಎನ್ನುವುದು ಕಣ್ಣಿಗೆ ರಾಚುತ್ತಿರುವ ವಾಸ್ತವ. ಹೆಣ್ಣೆಂಬ ಕಾರಣಕ್ಕೆ ತಾನು ಪರಿಸ್ಥಿತಿಯ ಗೊಂಬೆಯಾಗುವುದರಿಂದ ತಪ್ಪಿಸಿಕೊಳ್ಳುವುದನ್ನ ನಟಿಯರು ಕಲಿಯಬೇಕಿದೆ. ಆತ್ಮವಿಶ್ವಾಸ ಮತ್ತು ಆತ್ಮಸಮ್ಮಾನ ಎರಡನ್ನೂ ಬೆಳೆಸಿಕೊಳ್ಳಬೇಕಿದೆ. ತನ್ನನ್ನು ಗೌರವಿಸದ ಹೊರತು, ಎದುರಿನವರಿಗೂ ತನ್ನಿಂದ ಗೌರವ ಸಿಗದು ಎನ್ನುವುದನ್ನ ನಯವಾಗಿಯೇ ತನ್ನ ವರ್ತನೆಯ ಮೂಲಕ ತೋರಿಸಿಕೊಡಬೇಕು. ತಾನಿಲ್ಲಿ ಬಂದಿರುವುದು ವಹಿಸಿಕೊಂಡ ಕೆಲಸಕ್ಕಾಗಿಯೇ ಹೊರತು ಯಾರದೋ ಚಪಲ ತೀರಿಸಲಲ್ಲ ಎನ್ನುವುದನ್ನು ಪದೇ ಪದೇ ಮನದಟ್ಟು ಮಾಡಿಕೊಡಬೇಕು. ಇಷ್ಟು ವರ್ಷ ಚಿತ್ರರಂಗದಲ್ಲಿ ನಡೆಯುವ ಅನ್ಯಾಯಗಳ ದೂರು ಸಲ್ಲಿಸಲು ಯಾವುದೇ ಆಂತರಿಕ ದೂರು ಸಮಿತಿ (ICC ಇಂಟರ್ನಲ್ ಕಂಪ್ಲೇಂಟ್ ಕಮೀಟಿ) ನಮ್ಮಲ್ಲಿರಲಿಲ್ಲ. ಆದರೀಗ ನಟ ಚೇತನ್ ಅವರು ತಮ್ಮ F I R E ಸಂಸ್ಥೆಯಲ್ಲಿ ಇಂಥ ಕಮಿಟಿಯೊಂದನ್ನು ರಚಿಸಿ ಕಲಾವಿದರಿಗೆ, ತಂತ್ರಜ್ಞರಿಗೆ ದೂರು ಸಲ್ಲಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಚೇತನ್ ಅವರನ್ನೊಳಗೊಂಡಂತೆ ಈ ಕಮಿಟಿಯಲ್ಲಿ ಡಾ. ವಿಜಯಾ(ಹಿರಿಯ ಸಿನಿಮಾ ಪತ್ರಕರ್ತರು, ಸಾಮಾಜಿಕ ಹೋರಟಗಾರರು), ಕವಿತಾ ಲಂಕೇಶ್(ಚಿತ್ರ ನಿರ್ದೇಶಕರು), ಜಯ್ನಾ ಕೊಠಾರಿ(ವಕೀಲರು), ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಮತ್ತು ನಾನು, ಹೀಗೆ ಒಟ್ಟು ಹನ್ನೊಂದು ಜನ ಸದಸ್ಯರಿದ್ದೇವೆ. ಇಲ್ಲಿ ದೂರು ಕೊಟ್ಟಲ್ಲಿ, ತಮ್ಮ ಹೆಸರು ಬಯಲಿಗೆ ಬೀಳುತ್ತೆ, ಬಣ್ಣ ಬಯಲಾಗಿ ಮರ್ಯಾದೆ ಹೋಗುತ್ತೆ ಎನ್ನುವ ಭಯಕ್ಕೇನೇ ಎಷ್ಟೋ ಜನ ಅಸಭ್ಯವಾಗಿ ವರ್ತಿಸುವುದನ್ನ ನಿಲ್ಲಿಸುತ್ತಾರೆ. ಇನ್ನುಳಿದವರಿಗೆ ಅದು ಪಾಠವಾಗುತ್ತದೆ. ನೊಂದವರು ದೂರು ಕೊಡುವ ಧೈರ್ಯ ಮಾಡುವ ಮೂಲಕ ನ್ಯಾಯಕ್ಕಾಗಿ ICCಯ ಸದುಪಯೋಗ ಮಾಡಿಕೊಳ್ಳಬೇಕು.

- ಜಯಲಕ್ಷ್ಮಿ ಪಾಟೀಲ್
(ಮಹಿಳಾ ದಿನಾಚರಣೆಯ ಪ್ರಯುಕ್ತ, ಈ ಲೇಖನ ಸುಚಿತ್ರಾ ಫಿಲ್ಮ್ ಸೊಸೈಟಿಯ ಮಾಸಿಕ, ‘ಅಪ್ರಿಸಿಯೇಶನ್’ನಲ್ಲಿ ಪ್ರಕಟಗೊಂಡಿದೆ. ಪೂರ್ಣ ಲೇಖನ ಸುಚಿತ್ರದ ವೆಬ್‍ಸೈಟ್ www.suchitra.org ನಲ್ಲಿ)




Friday, August 26, 2016

ಮಾನವೀಯತೆ ಮತ್ತು ಕಲಾವಿದರು



ನಟನೆಯ ಕಲಾವಿದರು ಎಂದರೆ ತುಂಬಾ ಜನಕ್ಕೆ ಶೋಕಿಯವರು ಎನ್ನುವ ಹಗುರ ಭಾವವೇ ಹೆಚ್ಚು, ಜೊತೆಗೆ ಅವರ ಬಗ್ಗೆ ನಂಬುಗೆ ಕಡಿಮೆ.
ಯಾಕೆ ಹಾಗೆ? ತೊಡುವ ಬಟ್ಟೆ, ಮುಖಾಲಂಕಾರ, ಕೇಶಾಲಂಕಾರ, ಪರದೆ ಮೇಲೆ/ರಂಗದ ಮೇಲೆ ಬಡತವನ್ನೂ ಸಹ ವೈಭವೋಯುತವಾಗಿ ಕಾಣಿಸುವ ಬಣ್ಣಬಣ್ಣದ ಬೆಳಕಿನ ಕಾರಣದಿಂದಾಗಿಯೇ?
ನಟನೆಯನ್ನ ಯಾರೂ ಮಾಡಬಹುದು ಎಂಬ ಹುಂಬ ಆಲೋಚನೆಯಿಂದಾಗಿಯೇ?
ರಂಗದ ಮೇಲೆ, ಕ್ಯಾಮೆರಾ ಎದುರು ನಟಿಸುವವರು ನಿಜ ಬದುಕಿನಲ್ಲಿ ನಟಿಸಲು ಗೊತ್ತಿಲ್ಲದವರು ಎನ್ನುವುದನ್ನು ಒಪ್ಪಿಕೊಳ್ಳಲಾರದ ಮನಸ್ಥಿತಿಯೇ?
ನಟನೆಯನ್ನುವುದು ಜನಕ್ಕೆ ಮನರಂಜನೆಯ ವಿಷಯವಾಗಿರುವುದರಿಂದ, ಕಲಾವಿದರು ತಮ್ಮ ನಿಜ ಬದುಕಲ್ಲೂ ಹಾಗೇ ಇರುತ್ತಾರೆ, ಅವರೇನು ಅದಕ್ಕಿಂತ ಮಿಗಿಲಾಗಿ ಮಾಡಬಲ್ಲರು ಅನ್ನುವ ತಪ್ಪು ಕಲ್ಪನೆಯಿಂದಾಗಿಯೇ?
ಅದರಲ್ಲೂ ನಟಿಯಾಗಿದ್ದರಂತೂ ಆಕೆಯನ್ನ ತಮ್ಮನ್ನು ತಾವು ಸೊ ಕಾಲ್ಡ್ ಎಜ್ಯೂಕೇಡ್ ಎಂದು ಕರೆದುಕೊಳ್ಳುವ ಜನ ಸಹ ನೋಡುವ ದೃಷ್ಟಿಯೇ ಬೇರೆಯಾಗಿರುತ್ತೆ! ಯಾಕೆ ಹೀಗೆ?
ಎಷ್ಟು ಜನರಿಗೆ ಗೊತ್ತು ಕಲಾವಿದರೊಳಗಿನ ಮಾನವೀಯತೆಯ ಕುರಿತು, ಉಳಿದೆಲ್ಲರಿಗೂ ಇರುವಂಥ ಕಷ್ಟಕಾರ್ಪಣ್ಯದಷ್ಟೆ ಕಲಾವಿದರುಗಳಿಗೂ ಇರುತ್ತೆ ಎನ್ನುವುದರ ಬಗ್ಗೆ? ಬಿಡಿ ಕಷ್ಟಕಾರ್ಪಣ್ಯದ ಬಗ್ಗೆ ಹೇಳಿಕೊಂಡರೆ ಕರುಣೆಯನ್ನು ಗಿಟ್ಟಿಸಲು ಎಂದೆನಿಸೀತೇನೋ ಜನರಿಗೆ... ಎಷ್ಟು ಜನರಿಗೆ ಗೊತ್ತು ಒಳ್ಳೆಯ ಮನಸಿನ, ಸಾತ್ವಿಕ ಗುಣದ ಸಾವಿರಾರು ಜನ ನಟನಾ ಕಲಾವಿದರು ನಮ್ಮ ನಡುವೆಯೇ ಇದ್ದು, ಜನರ ಇಂಥಾ ತಪ್ಪುಕಲ್ಪನೆಗಳನ್ನು ಮನಸಿಗೆ ತಂದುಕೊಳ್ಳದೆ, ತಮ್ಮ ಪಾಡಿಗೆ ತಾವು ತಮ್ಮ ತಮ್ಮ ಕೈಲಾದಷ್ಟು ನಮ್ಮ ಸಮಾಜಕ್ಕಾಗಿ, ಬಡವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು?

ಗೌರವ ಎನ್ನುವುದು ಕೇಳಿಪಡೆಯುವುದಲ್ಲ, ಎದುರಿನವರಲ್ಲಿ ತಾನಾಗಿಯೇ ಹುಟ್ಟಬೇಕಾದುದು ಎನ್ನುವುದನ್ನ ಬಲ್ಲೆ ನಾನು.

ಥಳುಕುಬಳುಕಿನ ಲೋಕವೆಂದೇ ಪ್ರಸಿದ್ಧಿಯಲ್ಲಿರುವ ಕ್ಷೇತ್ರದ, ಕಣ್ಣುಕುಕ್ಕುವ ಬಣ್ಣದ ಬೆಳಕಲ್ಲಿ, ಕಲಾವಿದರು ಮಾಡುವ ಒಳ್ಳೆಯ ಕೆಲಸಗಳು ಪರದೆಯಾಚೆಗಿನ ಕೆಲಸವಾಗಿ ಗೌಣವಾಗುವುದೇ ಹೆಚ್ಚು. ಅದರಲ್ಲೂ ಹೆಚ್ಚಾಗಿ ಸಿನಿಮಾ ಹೀರೊ ಮತ್ತು ಹೀರೋಯಿನ್‍ಗಳೆಂದರೆ, ಅಪಾರ ಸಂಪತ್ತು ಹೊಂದಿದವರು (ಎಲ್ಲ ಹೀರೊ ಹೀರೋಯಿನ್‍ಗಳ ಬಳಿ ಅಷ್ಟು ಹಣ ಇರುವುದಿಲ್ಲ ಎನ್ನುವುದು, ಹಣ ಇದ್ದವರು ಬಹುತೇಕರು ಪರರ ಒಳಿತಿಗೂ ವಿನಿಯೋಗಿಸುತ್ತಾರೆ ಎನ್ನುವುದು ಎಷ್ಟೋ ಜನಕ್ಕೆ ಗೊತ್ತೇ ಇಲ್ಲ!), ಬುದ್ದಿಯಿಲ್ಲದವರು, ಕೇವಲ ಶೋಕಿ ಜನ ಎನ್ನುವ ಭಾವನೆಯೇ ತುಂಬಾ ಜನರಲ್ಲಿ. ಒಬ್ಬ ಹೀರೊ ಇಲ್ಲವೇ ಹೀರೋಯಿನ್ ಎಷ್ಟೆಲ್ಲ ವಿಷಯಗಳಲ್ಲಿ ಪರಿಣಿತಿ ಪಡೆದಿರಬೇಕು ಎನ್ನುವ ವಿಷಯ ತುಂಬಾ ಜನಕ್ಕೆ ಗೊತ್ತಿಲ್ಲ.

ನಿನ್ನೆಯ ನನ್ನ ಪೋಸ್ಟ್, ಬಣ್ಣದವರ ಕುರಿತು ಇಂಥದ್ದೊಂದು ಜನರ ಅಭಿಪ್ರಾಯವನ್ನು ಕೊಂಚಮಟ್ಟಿಗಾದರೂ ಬದಲಿಸುವ ನಿಟ್ಟಿನಲ್ಲಿ ಹಾಕಿದ್ದು. ಪ್ರತಿಕ್ರಿಯಿಸಿದವರು ಕಡಿಮೆ ಜನರಿದ್ದುದೇ ತುಂಬಾ ಜನಕ್ಕೆ ಈ ಬಗ್ಗೆ ಹೆಚ್ಚು ಗೊತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸುತ್ತದೆ. (ಇದೊಂದು ಮಹತ್ವದ ಪೋಸ್ಟ್ ಅಲ್ಲ ಎನಿಸಿ ಸುಮ್ಮನಿದ್ದವರೂ ಹಲವರಿರಬಹುದು)

ನಿನ್ನೆ ನಾನು <<< ಎಷ್ಟು ಜನ, ಯಾರೆಲ್ಲ ಅಭಿನಯ ಕ್ಷೇತ್ರದ ಕಲಾವಿದರು (ಯಾವುದೇ ಭಾಷೆಯಿರಲಿ) ತಮ್ಮನ್ನು ತಾವು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ/ಜನರಿಗೆ ನೆರವಾಗುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ?>>>
ಎಂದು ಕೇಳಿದ್ದ ಪ್ರಶ್ನೆಗೆ ಕೆಲವು ಸ್ನೇಹಿತರು ಒಂದಿಷ್ಟು ಜನರ ಹೆಸರುಗಳನ್ನು ಹೇಳಿದ್ದಾರೆ, ಒಮ್ಮೆ ಓದಿ ನೋಡಿ,
ಈ ಎಲ್ಲರಲ್ಲದೇ ಇನ್ನೂ ಸಾವಿರಾರು ಜನ ಕಲಾವಿದರು ಎಲೆಮರೆಯ ಕಾಯಿಗಳಂತೆ, ಸದ್ದಿಲ್ಲದೆ ಕೆಲಸ ಮಾಡುತ್ತಿರುವವರಿರಬಹುದು, ಕೆಲಸ ಮಾಡುತ್ತಿರುವುದು ಹಲಾವಾರು ಜನರ ಗಮನಕ್ಕೆ ಬಂದರೂ, ಅದು ಗೊತ್ತಿದ್ದೂ ಅವರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದೇ ಇದ್ದವರು ಇರಬಹುದು (ನನ್ನ ಪೋಸ್ಟಿನ ಭಾಷಾ ಮಿತಿಯಿಂದಾಗಿ), ಇಲ್ಲಾ ಇನ್ನೇನೋ ಕಾರಣಗಳಿರಬಹುದು.

ಒಟ್ಟಿನಲ್ಲಿ ನಿನ್ನೆಯ ದಿನ ಸಮಾಜಕ್ಕೆ ನೆರವಾಗುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಲಾವಿದರುಗಳ ಪುಟ್ಟ ಪಟ್ಟಿಯೊಂದು ಸಿದ್ಧವಾಗಿದೆ ನೋಡಿ ಇಲ್ಲಿ. :)
|

*ಅಂಬರೀಶ್,
*ಡಾ. ರಾಜಕುಮಾರ,
*ದತ್ತಣ್ಣ,
*ಉಮಾಶ್ರೀ,
*ರಜನಿಕಾಂತ್,
*ಅಮೀರ್ ಖಾನ್,
* ವಿಷ್ಣುವರ್ಧನ್,
*ನಾನಾ ಪಾಟೇಕರ್,
*ಪುನಿತ್ ರಾಜಕುಮಾರ್,
*ಸೂರ್ಯ (ತಮಿಳು),
*ಅಮಿತಾಬ್ ಬಚ್ಚನ್,
*ಜಾನ್ ಅಬ್ರಾಹ್ಂ,
*ಅವಿನಾಶ್ ಕಾಮತ್ (ರಂಗಭೂಮಿ),
*ಚೇತನ್,
*ದಿಯಾ ಮಿರ್ಜಾ,
*ಶಿವರಾಜಕುಮಾರ್,
*ಪ್ರಕಾಶ್ ರೈ,
*ಪ್ರಕಾಶ್ ಬೆಳವಾಡಿ,
*ಮೋಹನ್ ಮಾರ್ನಾಡ್ (ರಂಗಭೂಮಿ),
*ಸುಹಾಸಿನಿ,
*ಶಬಾನ ಆಜ್ಮಿ,
*ನಂದಿತಾ ದಾಸ್,
*ಕೊಂಕಣ್ ಸೇನ್,
*ಸಲ್ಮಾನ್ ಖಾನ್,
*ವಿದ್ಯಾ ಬಾಲನ್,
*ವಿಜಯ (ತಮಿಳು),
*ರಾಹುಲ್ ಬೋಸ್,
*ಚಿರಂಜೀವಿ,
*ಸಮಂತಾ ರುತ್,
*ಪ್ರಭು,
*ಮಹೇಶ್ ಬಾಬು,
*ಫರಾನ್ ಅಕ್ತರ್,
*ಅಲ್ಲು ಅರ್ಜುನ್,
*ಲೀಲಾವತಿ,
*ಸತೀಶ್ ಮಂಡ್ಯಾ,
*ಬಿ ಸುರೇಶ್,
*ರಾಘವ ಲಾರೆನ್ಸ್ (ತಮಿಳು),
*ಅಕ್ಕಿನೇನಿ ನಾಗಾರ್ಜುನ್,
*ಎನ್‍ಟಿಆರ್,
* Elton John,
*Br-Angelina Jolie Couple,
*Miley Cyrus,
*Madona,
*Lady Gaga,
*Will Smith,
*Sandra Bullock,
*ಮಂಡ್ಯ ರಮೇಶ್,
*ಸುರೇಶ್ ಹೆಬ್ಳಿಕರ್,
*ದರ್ಶನ್,
*ಯಶ್,
*ಪ್ರಸನ್ನ,
*ನಾಸಿರುದ್ದೀನ್ ಶಹಾ,
*ಕುಮುದವಲ್ಲಿ ಅರುಣಮೂರ್ತಿ,
*ವನಜಾಕ್ಷಿ ಕೊಳಗಿ (ರಂಗಭೂಮಿ),
*ಮಧುಸ್ಮೃತಿ ಶುಕ್ಲಾ (ರಂಗಭೂಮಿ),
*ಸ್ಪಟಿಕಾ (ರಂಗಭೂಮಿ),
*ದು. ಸರಸ್ವತಿ (ರಂಗಭೂಮಿ),
*ಕೋಟಾಗಾನಹಳ್ಳಿ ರಾಮಯ್ಯ
ಮತ್ತು ಅನೇಕ *ನಿನಾಸಂ ಪದವಿಧರ ನಟ/ನಟಿಯರು
* ಕಿರಣ್ ಖೇರ್
ಹಾಗೂ
*ಜಯಲಕ್ಷ್ಮೀ ಪಾಟೀಲ್
* ಶಂಕರನಾಗ್
* ಸುಚೀಂದ್ರ ಪ್ರಸಾದ್
* ಮೃಣಾಲ್ ದೇವ್ ಕುಲಕರ್ಣಿ
*Paul Walker
*Nafisa Ali
*Leonardo DiCaprio
*Adam Sandler
*Gisele Bundchen
*Mel Gibson
*Kristen Stewar
* ಶಿಲ್ಪಾ ಶೆಟ್ಟಿ
* ಐಶ್ವರ್ಯ ರೈ
* ವಿವೇಕ್ (ತಮಿಳು ಹಾಸ್ಯ ನಟ)
* ಮುರಳಿ ಕಡೇಕಾರ (ಯಕ್ಷಗಾನ)
* ಮದ ಗೋಪಾಲ್ (ಯಕ್ಷಗಾನ)

-  ಜಯಲಕ್ಷ್ಮೀ ಪಾಟೀಲ್ (೨೭ ಆಗಸ್ಟ್ ೨೦೧೫)ಫೇಸ್‍ಬುಕ್ ನೋಟ್
ಮುಂದುವರೆಯುತ್ತಲೆ ಇರುತ್ತದೆ ಈ ಲಿಸ್ಟ್.

Friday, May 8, 2015

ಕೇವಲ ನಾಲ್ಕೂವರೆ ಸಾವಿರ ರೂಪಾಯಿಗಳಲ್ಲಿ ನಾಟ್ಕಾ ಮಾಡಿಸಿದ್ವಿ!



ಹೌದು ಕೇವಲ ನಾಲ್ಕೂವರೆ ಸಾವಿರ ರೂಪಾಯಿಗಳಲ್ಲಿ ನಾಟ್ಕಾ ಮಾಡಿಸಿದ್ದ್ವಿ.





ಎಷ್ಟು ಚೆಂದ ಗೊತ್ತಾ ಮಕ್ಕಳೊಡನಾಟ! ಅಂತೂ ನನ್ನ ಬಾಲ್ಯದ ಟೀಚರ್ ಆಗೊ ಕನಸು ಗೋರೆಗಾಂವ್ ಮುನ್ಸಿಪಾಲ್ಟಿ ಕನ್ನಡ ಶಾಲೆಯ ಮಕ್ಕಳು ನೆರವೇರಿಸಿ ನನ್ನನ್ನ ಧನ್ಯಳಾಗಿಸಿದರನ್ನಿ. ನನ್ನ ಟೀಚರ್‍ಗಿರಿ ಕಂಡು ಕೆಲವೊಮ್ಮೆ ಅವಿನಾಶ್ ಮತ್ತು ಅಕ್ಷತಾ ಇಬ್ಬರಿಗೂ ಆ ಮಕ್ಕಳ ಮೇಲೆ ಕರುಣೆಯೂ ನನ್ನ ಮೇಲೆ ಸಿಟ್ಟೂ ಏಕಕಾಲಕ್ಕೆ ಉಂಟಾಗುತ್ತಿದ್ದವು. ನಾನಾದ್ರೂ ಏನ್ ಮಾಡ್ಲಿ, ಟೀಚರ್‍ಗಿರಿ ಸುಲಭವಲ್ಲ ಅಂದು ಗೊತ್ತಾಗಿದ್ದೇ ಆಗ ನನಗೆ. ಮಕ್ಕಳೆಂದರೆ ಟೀಚರ್ ಹೇಳಿದ ಹಾಗೆ ಕೇಳಬೇಕು ಅನ್ನುವುದು ನನ್ನ ತಲೆಯಲ್ಲಿ ಫಿಕ್ಸ್ ಆಗಿತ್ತು ನನ್ನ ಬಾಲ್ಯದ ಸ್ಟೂಡಂಟ್‍ಗಿರಿಯನ್ನು ಮರೆಸಿ. ಈ ಮಕ್ಕಳೋ ಹೇಳಿ ಕೇಳಿ ಮುಂಬೈ ಮಕ್ಕಳು. ಹೆಚ್ಚಿನವರ ಮನೆಯಲ್ಲಿ ತುಳು ಮಾತಾಡುತ್ತಾರೆ ಮನೆಯಾಚೆ ಹಿಂದಿ ಜೊತೆಗೆ ಓದುತ್ತಿರುವುದು ಮುನ್ಸಿಪಾಲ್ಟಿ ಶಾಲೆಯಲ್ಲಿ! ನಟನೆಯ ಜೊತೆಗೆ ಕನ್ನಡವನ್ನೂ ಹೇಳಿಕೊಡಬೇಕಿತ್ತು ನಾವು!ಪಾಪ ಅವುಗಳಿಗೆ ಕನ್ನಡ ಓದಿ ಮಾತಾಡಿ ಅಂತ ನನ್ನಂಥ ಆದರ್ಶ ತುಂಬಿದ ಹೊಸಾಹೊಸಾ ಹುರುಪಿನ ಟೀಚರ್ ಪ್ರಾಣ ತಿಂದ್ರೆ ಅವಾದ್ರೂ ಏನ್ ಮಾಡಿಯಾವು!? ಏನೂ ಮಾಡ್ತಿರ್ಲಿಲ್ಲ, ನನ್ನ ಸಹನೆ ಪರೀಕ್ಷೆ ಮಾಡ್ತಿದ್ವು ಅಷ್ಟೇ. ಮತ್ತು ನನ್ನ ಸಹನೆ ಎರಡು ಮೂರು ದಿನಕ್ಕೊಮ್ಮೆ ನಪಾಸು ಮಕ್ಕಳೆದುರು... ಆದ್ರೂ ನಾಟ್ಕ ಮುಗಿಯೋವಷ್ಟರಲ್ಲಿ ಅವರಲ್ಲಿ ಮೂರ್ನಾಲ್ಕು ಜನ ಕನ್ನಡವನ್ನ ಮುಂಚಿನ ಹಾಗೆ ತಡಬಡಿಸದೆ ಆರಾಮಾಗಿ ಓದುವಂತಾಗಿದ್ದು ಖುಷಿ ಕೊಟ್ಟ ಸಂಗತಿ.

ಅವರ ಅಪರಿಚಿತತೆಯ ಸಂಕೋಚವನ್ನ ಬಿಡಿಸಿ, ಅದರ ಜಾಗದಲ್ಲಿ ಈ ಟೀಚರ್ ಅಂದ್ರೆ ಭಯ, ಅವಿನಾಶ್ ಸರ್ ಮತ್ತು ಅಕ್ಷತಾ ಟೀಚರ್ ಅಂದ್ರೆ ಪ್ರೀತಿ ಹುಟ್ಟಿಸಿ, ನೆಟ್ಟಗೆ ಒಂದೆಡೆ ನಿಲ್ಲುವುದರಿಂದ ಮೊದಲ್ಗೊಂಡು ಅವರವರ ಪಾತ್ರಗಳನ್ನ ಸಾಧ್ಯವಾದಷ್ಟೂ ಅವರುಗಳಿಗೆ ಅರ್ಥ ಮಾಡಿಸಲು ಯತ್ನಿಸಿ, ಡೈಲಾಗ್ಸ್ ಎಲ್ಲಾ ಅಭಿನಯಪೂರ್ವಕವಾಗಿ ಹೇಳುವಂತೆ ಮಾಡುವಷ್ಟರಲ್ಲಿ ನಾನೊಂದಿಷ್ಟು ಸಹನೆ ಕಲಿತಿದ್ದೆ. ನಾಟಕದ ದಿನ ಗೋರೆಗಾಂವ್ ಸಂಘದ ಎದುರು ಮಿನಿ ಬಸ್ಸನೇರಿದ ಮಕ್ಕಳೊಂದಿಗೆ ನಾನು ಮೃದುವಾಗಿದ್ದೆ. ಟೀಚರ್ ಮರೆಯಾಗಿ ಒರಿಜಿನಲ್ ಜಯಲಕ್ಷ್ಮೀ ಅಂದು ದಾರಿಯುದ್ದಕ್ಕೂ ಮಕ್ಕಳ ಜೊತೆಗಿದ್ದಳು. ಮಕ್ಕಳಿಗೋ ಶುರುವಿನಲ್ಲಿ ತುಸು ದಿಗಿಲು, ಇವ್ರು ಅದೇ ಸಿಡುಕು ಮೋರೆ ಟೀಚರ್ ತಾನೆ ಎಂದು. ಮಕ್ಕಳು ಕರಗೋಕೆ ಎಷ್ಟೊತ್ತು ಬೇಕು ಹೇಳಿ? ಹತ್ತು ಹದಿನೈದು ನಿಮಿಷದಲ್ಲಿ ಮಕ್ಕಳ ಮುಖದ ಬಿಗು ಸಡಿಲಗೊಂಡು ಚೈತನ್ಯದ ಚಿಲುಮೆಗಳಾದ್ರು. ನನಗದೇ ತಾನೇ ಬೇಕಾಗಿದ್ದುದು. ಎರಡು ಮಕ್ಕಳ ತಾಯಿಯಾಗಿ ಮಕ್ಕಳ ಮನಸ್ಥಿತಿ ಗೊತ್ತಿದ್ದರಿಂದ ರಿಹರ್ಸಲ್ ಟೈಮಲ್ಲಿ ತುಸು ಬಿಗುವಾಗಿದ್ದು ಮಕ್ಕಳು ಶಿಸ್ತಿನಿಂದ ಎಲ್ಲವನ್ನೂ ಅಭ್ಯಾಸ ಮಾಡುವಂತೆ ನೋಡಿಕೊಂಡು ನಾಟಕದ ದಿನ ಬಿಗು ಸಡಲಿಸಿದ್ದೇ ಮಕ್ಕಳು ಆತ್ಮವಿಶ್ವಾಸದ ಗಣಿಯಾದರು. ಯಾವುದೇ ಸೆಟ್ ಇಲ್ಲದೆ, ಹಾರ ಬಿಟ್ಟರೆ ಇನ್ನೊಂದು ಪ್ರಾಪರ್ಟಿ ಇಲ್ಲದೆ ನನ್ನ ಕಂದಮ್ಮಗಳು ಕೇವಲ ತಮ್ಮ ಚುರುಕುತನದಿಂದ ಮತ್ತು ಅಭಿನಯದಿಂದ ಅಲ್ಲಿದ್ದ ಪ್ರೇಕ್ಷಕರೆಲ್ಲರ ಮನಸ್ಸನ್ನ ಗೆದ್ದುಬಿಟ್ಟರು. ನಾಟಕ ಮುಗಿದಿದ್ದೇ ಸಭಾಂಗಣದಲ್ಲಿದ್ದ ಅರ್ಧಕ್ಕೂ ಹೆಚ್ಚು ಮಂದಿ ಧಾವಿಸಿ ಸೈಡ್ ವಿಂಗಲ್ಲಿ ಜಮಾಯಿಸಿ ಮಕ್ಕಳನ್ನು ಅಭಿನಂದಿಸಿದ್ದು ನೆನೆದರೆ ನನಗೆ ಇಂದಿಗೂ ರೋಮಾಂಚನ! ಈ ನಾಟಕದಲ್ಲಿ ಕಪ್ಪೆರಾಯನ್ನ ರಾಜಕುಮಾರಿ ಮದುವೆಯಾಗಿ, ಅವನು ಮತ್ತೆ ರಾಜಕುಮಾರನಾಗುವ ಸೀನ್ ಬರುತ್ತೆ. ಅದೆಷ್ಟು ನಾಚಿಕೆ ಅಂತೀರಿ ಮಕ್ಕಳಿಗೆ!! ತಮ್ಮ ನಿಜದ ಮದುವೆಯಲ್ಲಾದ್ರೂ ಅಷ್ಟು ನಾಚ್ಕೊಳ್ತಾವೋ ಇಲ್ವೋ, ರಿಹರ್ಸಲ್ಲಿನಲ್ಲಂತೂ ಮದುವೆ ಮಾಡ್ಸೋಕೆ ಪ್ರತೀ ಸಲ ಹರಸಾಹಸ ಪಡಬೇಕಿತ್ತು. ಮದುವೆ ಆಗೋವು ನಾಚಿಕೊಳ್ಳೋವು, ಉಳಿದ ಮಕ್ಕಳು ಆ ಸೀನ್ ಬಂದ ತಕ್ಷಣ ಕಿಸಿಕಿಸಿ ಅಂತ ನಗೋಕ್ ಶುರು ಮಾಡೋವು! ಎಷ್ಟು ಚೆಂದ ಮತ್ತು ಮುಗ್ಧ ಪ್ರಪಂಚ ಅದು! ಒಂದೊಂದು ಮಗುವೂ ತನ್ನದೇ ತುಂಟತನದಿಂದ, ಸಂಕೋಚದಿಂದ, ತರ್ಲೆಬುದ್ದಿಯಿಂದ ಇಷ್ಟ ಆಗಿತ್ತು. ಚೋಟುದ್ದ ಹುಡುಗನಿಗೂ ಇಗೊ ಕಾಡುತ್ತಿತ್ತು! ಪುಟಾಣಿ ಹೃದಯಕ್ಕೂ ನೋವು ಅರ್ಥ ಆಗ್ತಿತ್ತು!

ಎಲ್ಲ ಮಕ್ಕಳೂ ಮುದ್ದೇ. ಅದರಲ್ಲೂ ಲಕ್ಷ್ಮೀ ಎನ್ನುವ ಬಟ್ಟಲಗಣ್ಣಿನ ಮಗುವಂತೂ ನನಗೆ ಮತ್ತು ಅವಿನಾಶ್‍ಗೆ ಒಂದು ಕೈ ಹೆಚ್ಚೇ ಮುದ್ದು. ಆ ಅಂಥ ಲಕ್ಷೀ ನಾಟಕದ ಮಧ್ಯ ತನ್ನ ಡೈಲಾಗ್ ಹೇಳುವಾಗ ಒಂದು ಶಬ್ದವನ್ನು ಮರೆತಿತು. ಸಾಲನ್ನಲ್ಲ ಶಬ್ದವನ್ನ. ಮರೆತರೂ ಏನೂ ಆಗದವಳಂತೆ ತನ್ನ ಡೈಲಾಗ್ ಮುಗಿಸಿ ಸೈಡ್ ವಿಂಗಿಗೆ ಬಂದವಳ ಬಟ್ಟಲಗಣ್ಣ ತುಂಬಾ ನೀರು! ‘ಟೀಚರ್ ಮರೆತುಬಿಟ್ಟೆ ಟೀಚರ್, ನಾನು ಮರೆತುಬಿಟ್ಟೆ ಟೀಚರ್’ ಎಂದು ಅವಲತ್ತುಕೊಳ್ಳತೊಡಗಿದಳು. ಅವಳು ಹಾಗೆ ಕಣ್ಣುತುಂಬಿಕೊಂಡು ಮರೆತಿದ್ದರ ಬಗ್ಗೆ ಗಿಲ್ಟ್ ಅನುಭವಿಸಿದ ದೃಶ್ಯ ಈಗಷ್ಟೇ ಕಣ್ಣ ಮುಂದೆ ನಡೆದಷ್ಟು ನಿಚ್ಚಳ ನನ್ನ ಮನದಲ್ಲಿ... ನೆಕ್ಸ್ಟ್ ಸೀನ್ ಅವಳದ್ದೇ ಇತ್ತು. ಬೆಕ್ಕಾಗಿ ಮತ್ತೆ ರಂಗಪ್ರವೇಶಿಸಬೇಕಿತ್ತು ಆ ಮಗು. "ನೀನು ತಪ್ಪೇ ಮಾಡಿಲ್ಲ, ನೀನೇ ಹಾಗಂದ್ಕೋತಾ ಇದ್ದಿ, ನೋಡು ಮುಂದಿನ ಸೀನ್ ನಿನ್ನದೇ ಅಲ್ವಾ? ನಗೊ ಬೆಕ್ಕು ಅತ್ರೆ ಚೆನ್ನಾಗಿರುತ್ತಾ?" ಅಂತ ಮುಂತಾಗಿ ಏನೋ ಪೂರ್ತಿ ನೆನಪಿಲ್ಲ, ಅವಳ ಕಿವಿಯಲ್ಲಿ ಪಿಸುಗುಟ್ಟಿ, ನಗಿಸಿ ಸ್ಟೇಜಿಗೆ ಕಳಿಸಿದೆ. ಹಿರೋಯಿನ್ ಸೈಡ್ ವಿಂಗಲ್ಲಿ ಏನೂ ಆಗೇ ಇಲ್ಲ ಅನ್ನೋ ಥರ ನಟಿಸಿ ಮುಗಿದ ಮೇಲೆ ಸೈಡ್ ವಿಂಗಲ್ಲಿ ನಿಂತಿದ್ದ ನನ್ನೆಡೆ ನೋಡಿ ಮುದ್ದಾದ ನಗು ಬೀರಿದಳು, ಚೆನ್ನಾಗ್ ಮಾಡ್ದೆ ತಾನೆ ಎನ್ನುವಂತೆ.
ಲವ್ ಯೂ ಲಕ್ಷ್ಮೀ, ಆಗಾಗ ನೆನಪಾಗ್ತಾ ಇರ್ತಿಯ ಕಂದಾ ನೀನು. ಈಗ ಎಲ್ಲಿದೀಯೋ ಏನ್ ಓದಿದ್ಯೋ, ಏನ್ ಮಾಡ್ತಿದೀಯೊ... ಸುಖವಾಗಿರು ಕೂಸೆ.
ಬಹುಶಃ ೨೦೦೨ ಅಥವಾ ೨೦೦೩ರಲ್ಲಿರಬೇಕು. ನನ್ನ ಮರೆವಿನ ಮಹಾಮಾರಿ ಕೃಪೆಯಿಂದಾಗಿ ಸರಿ ನೆನಪಾಗ್ತಿಲ್ಲ. ಮುಂಬೈನ ಕನ್ನಡ ಕಲಾ ಕೇಂದ್ರ ಮಕ್ಕಳ ನಾಟಕೋತ್ಸವ ಏರ್ಪಡಿಸಿ ನಾಟಕಗಳನ್ನ ಆಹ್ವಾನಿಸಿತ್ತು. ಆಯ್ಕೆಯಾದ ತಂಡಕ್ಕೆ ೨೦೦೦ ರೂಪಾಯಿಗಳ ಗೌರವಧನ ಕೊಡಲಾಗುವುದು ಎಂದಿತ್ತು ಪ್ರಕಟಣೆಯಲ್ಲಿ. ಅದನ್ನು ಓದಿ ಮಕ್ಕಳ ನಾಟಕವನ್ನು ಮಾಡಿಸುವ ಮನಸ್ಸಾಯ್ತು ನನಗೆ. ಅಷ್ಟಾದ್ರೆ ಸಾಕೆ? ನಾಟಕಕ್ಕೆ ಮಕ್ಕಳು ಬೇಡ್ವೆ? ಕಾಸು ಬೇಡ್ವೆ? ವಿಷಯ ಹೊತ್ತು ನನಗೆ ಗೊತ್ತಿರುವ ಎರಡು ಕನ್ನಡ ಸಂಘಗಳನ್ನು ಸಂಪರ್ಕಿಸಿದೆ. ಒಂದು ಮಾಟುಂಗಾ ಕರ್ನಾಟಕ ಸಂಘ. ಇನ್ನೊಂದು ಗೋರೆಗಾಂವ್ ಕರ್ನಾಟಕ ಸಂಘ. ಗೋರೆಗಾಂವ್ ಕರ್ನಾಟಕ ಸಂಘದವರು ರಿಹರ್ಸಲ್‍ಗೆ ಜಾಗ ಕೊಟ್ಟು, ನಾಟಕಕ್ಕೆ ಹೋಗಿಬರುವ ವ್ಯವಸ್ಥೆ ಮಾಡಿಕೊಟ್ಟು ಮೇಲೆ ೨೫೦೦ ರೂಪಾಯಿಗಳನ್ನು ಕೊಡುತ್ತೇವೆ ಅಂದರು. ನನಗೋ ದಿಗಿಲು! ಬರೀ ಎರಡೂವರೆ ಸಾವಿರದಲ್ಲಿ ಹೇಗೆ ನಾಟಕ ಮಾಡಿಸೋದು?! ಕನಿಷ್ಟ ಒಂದೈದು ಸಾವಿರನಾದ್ರೂ ಕೊಡಿ ಎಂದು ಕೇಳಿಕೊಂಡೆ. ಪಾಪ ಅವರುಗಳದ್ದೂ ಮಜಬೂರಿ, ಇಲ್ಲ ೨೫೦೦ ಅಷ್ಟೆ ಕೊಡೋಕಾಗೋದು, ಕನ್ನಡ ಕಲಾಕೇಂದ್ರದವರು ಕೊಡುವ ಹಣವನ್ನೂ ನಾಟಕಕ್ಕೇ ಬಳಸಿಕೊಳ್ಳಿ, ಅದನ್ನೇನು ಸಂಘಕ್ಕೆ ಕೊಡುವುದು ಬೇಡ ಅಂದ್ರು. ಕನ್ನಡ ಕಲಾಕೇಂದ್ರದವರೋ ನಾಟಕ ಮುಗಿದ ಮೇಲೆ ಹಣ ಕೊಡ್ತಾರೆ. ಹಣ ಇಲ್ಲ ಅಂತ ಈಗ ಕೈಬಿಟ್ರೆ... ಊಂಹೂಂ ಬಿಡೋಕೆ ಮನಸಿಲ್ಲ, ಹೇಗಾದ್ರೂ ಸರಿ ಅಷ್ಟರಲ್ಲೇ ಎಷ್ಟಾಗುತ್ತೋ ಅಷ್ಟು ಅಂತ ನಿರ್ಧರಿಸಿ, ಸ್ನೇಹಿತರಾದ ಅವಿನಾಶ್ ಮತ್ತು ಅಕ್ಷತಾರ ಜೊತೆ ಚರ್ಚಿಸಿ, ನಾನು ನಿರ್ದೇಶಿಸೋದು, ಅವಿನಾಶ್ ಸಂಗೀತ ಸಂಯೋಜನೆ ಮತ್ತು ಅಕ್ಷತಾ ಹಾಡೋದು ಅಂತ ಹೊರಟ್ವಿ. ಮಕ್ಕಳ ಜೊತೆಗಿನ ಒಡನಾಟವನ್ನ ಈಗಾಗ್ಲೆ ಹೇಳಿದೀನಿ. ಅದರಾಚೆ ಕೈಯಲ್ಲಿರೊ ಕಾಸು ತಲೆಗೆಳೆದ್ರೆ ಕಾಲಿಗಿಲ್ಲ, ಕಾಲಿಗೆಳೆದ್ರೆ ತಲೆಗಿಲ್ಲ ಅನ್ನೊ ಚಾದರದ ರೀತಿ! ಹೀಗಾಗಿ ಯಾವುದೇ ಸೆಟ್ ಪ್ರಾಪರ್ಟಿ ಗೋಜಿಗೂ ಹೋಗಲೇ ಇಲ್ಲ! ಎಲ್ಲ ಮಕ್ಕಳಿಗೂ ಬಟ್ಟೆ ಕೊಂಡುಕೊಂಡ್ರೆ ಇಲ್ಲಾ ಎಲ್ಲಾ ಬಟ್ಟೆನೂ ಬಾಡಿಗೆ ತಂದ್ರೆ ಕೈಲಿರುವ ಹಣದ ದುಪ್ಪಟ್ಟು ಖರ್ಚಾಗುತ್ತದೆಂದೆಣಿಸಿ, ಅನಿವಾರ್ಯವಾದುದನ್ನಷ್ಟೆ ಬಾಡಿಗೆ ತಂದು, ಒಂದಿಷ್ಟನ್ನು ದಾದರ್‍ನಲ್ಲಿ ಕೊಂಡ್ಕೊಂಡು, ನನ್ನ ಮನೆಯಿಂದೆರೆಡು ಸೀರೆ ಕುಪ್ಪಸ ತಂದು ಅಡ್ಜಸ್ಟ್ ಮಾಡಿದ್ವಿ. ಕಿರಿಟ ಇತ್ಯಾದಿಗಳನ್ನ ರಟ್ಟು ಬೇಗಡಿಯನ್ನೆಲ್ಲಾ ತಂದು ತಯಾರಿಸಿದ್ವಿ. ಅವಿನಾಶ್ ತಮ್ಮ ಸ್ನೇಹಿತರಲ್ಲಿ ಕೇಳಿ ತಬಲಾ ಮತ್ತು ಕೀ ಬೋರ್ಡನ್ನು ತಂದಿದ್ದಲ್ಲದೆ, ಪುಗಸಟ್ಟೆ ತಬಲಾ ನುಡಿಸಲು ಸ್ನೇಹಿತರೊಬ್ಬರ ಮನವೊಲಿಸಿ ಕರೆತಂದಿದ್ದರು. ಅಕ್ಷತಾ ಚೆಂದವಾಗಿ ಹಾಡಿದರು. ನನಗೆ ತಿಳಿದಂತೆ ಮೇಕಪ್ ಮಾಡಿದೆ. ಅಂತೂ ಇಂತೂ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ, ಕನ್ನಡ ಸರಿ ಬಾರದ ಮಕ್ಕಳಿಂದ ನೋಡಿದವರೆಲ್ಲಾ ಎಂಥಾ ಎನರ್ಜಿಟಿಕ್ ಆಗಿ ನಾಟ್ಕಾ ಮಾಡಿದ್ವು ಮಕ್ಳು ಅನ್ನುವಂತೆ ನಾಟಕ ಮಾಡಿಸಿದ್ವಿ.
ಅಂದ ಹಾಗೆ ಆ ನಾಟಕದ ಹೆಸರು ‘ಢಾಣಾಡಂಗುರ’. ವೈದೇಹಿಯವರು ಬರೆದ ಮಕ್ಕಳ ನಾಟಕಗಳಲ್ಲಿ ಒಂದಿದು.
ನಾಟಕದ ರಿಹರ್ಸಲ್‍ನ ಬ್ರೇಕ್ ಹೊತ್ತಲ್ಲಿ ಕೀಬೋರ್ಡ್ ನುಡಿಸುತ್ತಾ, ಅವಿನಾಶ್ ಹಾಡಿಕೊಳ್ಳುತ್ತಿದ್ದ ಹಾಡು ಕಿವಿ ಮೇಲೆ ಬಿದ್ದಾಗಲೆಲ್ಲ ಆ ಮಕ್ಕಳು, ನಾಟಕ, ಲಕ್ಷ್ಮೀ ಎಲ್ಲಾ ನೆನಪಾಗುತ್ತೆ.

Saturday, March 28, 2015

ನಾಟಕ ವಿಮರ್ಶೆ: ಆಟಿ ತಿಂಗೊಲ್ದ ಒಂಜಿ ದಿನ

ಮೂಲಆಷಾಢ್ ಕಾ ಏಕ್ ದಿನ್ --> ಕನ್ನಡದಲ್ಲಿಆಷಾಢದ ಒಂದು ದಿನ --> ತುಳುವಿನಲ್ಲಿಆಟಿ ತಿಂಗೊಲ್ದ ಒಂಜಿ ದಿನ ನಾಟಕ









ಆತ್ರಾಡಿ ಸುರೇಶ್ ಹೆಗ್ಡೆಯವರು ತೆಗೆದ ಭಾವಚಿತ್ರ




ಅತ್ರಾಡಿ ಸುರೇಶ್ ಹೆಗ್ಡೆಯವರು ತೆಗೆದ ಭಾವಚಿತ್ರ
____________________________________________________________


*ಮೋಹನ್ ರಾಕೇಶ್ ಅವರು ನಮ್ಮ ದೇಶದ ಒಬ್ಬ ಪ್ರಮುಖ, ಅತ್ಯುತ್ತಮ ನಾಟಕಕಾರ. ಕನ್ನಡಕ್ಕೆ ಅನುವಾದಗೊಂಡ ಅವರ ‘ಆಧೆ ಅಧೂರೆ’ ನಾಟಕದಲ್ಲಿ ಅಭಿನಯಿಸಿ ಮತ್ತು ಈ ‘ಆಷಾಢದ ಒಂದು ದಿನ’ ನಾಟಕವನ್ನು ಓದಿ ಅವರ ಸಂಭಾಷಣೆಗಳನ್ನು ಮತ್ತು ದೃಶ್ಯಗಳನ್ನು ಕಟ್ಟಿಕೊಡುವ ತಾಕತ್ತಿನ ಬಗ್ಗೆ ನಮ್ಮ ಗಿರೀಶ್ ಕಾರ್ನಾಡರ ತುಘಲಕ್, ಹಯವದನ, ಅಂಜುಮಲ್ಲಿಗೆ ಇತ್ಯಾದಿಗಳ ಕುರಿತ ರೀತಿಯಲ್ಲೇ ಬೆರಗುಗೊಂಡಿದ್ದೇನೆ. 
‘ಆಷಾಢದ ಒಂದು ದಿನ’  ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತಿದೆಯೇನೋ ಎಂಬಷ್ಟು ಸಂಭಾಷಣಾ ಪ್ರಧಾನ ನಾಟಕವಾದರೂ (ಆಧೆ ಅಧೂರೆ ಸಹ!) ಏನೂ ಹೇಳದೆಯೂ ಬಹಳಷ್ಟನ್ನು ಹೇಳಿಬಿಡುತ್ತಾರೆ ಮೋಹನ್ ರಾಕೇಶ್, ಥೇಟ್ ಕಾವ್ಯದಂತೆ! ಅದು ಕಾಳಿದಾಸ-ಮಲ್ಲಿಕಾರ ಪ್ರೀತಿ ಇರಬಹುದು, ಮಲ್ಲಿಕಾಳಿಗೆ ಅಮುಖ್ಯವೆನಿಸಿದರೂ ಕಾಳಿದಾಸನಷ್ಟೆ ಮುಖ್ಯವಾಗುವ ವಿಲೋಮನಿರಬಹುದು, ಬೆಳೆದ ಮಗಳ ಭಾವ ಪ್ರಪಂಚದಿಂದಾಗಿ ಹಣ್ಣಾದ ಅಂಬಿಕಾ ಇರಬಹುದು, ರಾಜಕುಮಾರಿ ಪ್ರಿಯಾಂಗು ಇರಬಹುದು, ಎಲ್ಲ ಪಾತ್ರಗಳ ವ್ಯಕ್ತಿತ್ವಗಳನ್ನೂ ನಮ್ಮ ಕಲ್ಪನಾ ಪ್ರಪಂಚದನುಸಾರ ನಮ್ಮ ನಮ್ಮ ಮನಸಿನಲ್ಲಿ ರೂಪುಗೊಳ್ಳಲ್ಲು ಅದೆಷ್ಟು ಅನುವು ಮಾಡಿಕೊಡುತ್ತಾರೆಂದರೆ, ರಂಗಮಂಚದಿಂದಾಚೆಗೂ ನಾಟಕ ಪ್ರೇಕ್ಷಕನ ಮನದ ಅಂಗಣಕ್ಕನುಗುಣವಾಗಿ ಬೆಳೆದು ಆಡ ತೊಡಗುತ್ತದೆ,ಕಾಡ ತೊಡಗುತ್ತದೆ! 

ಇಂಥ ಈ ನಾಟಕವನ್ನ ನಾನು ಓದಿ ೧೨-೧೩ ವರ್ಷಗಳ ಮೇಲಾಯಿತು. ನಾನು ಓದುವ ಮುಂಚೆಯೇ ಈ ನಾಟಕದಲ್ಲಿ ಅನುನಾಸಿಕನಾಗಿ ಅಭಿನಯಿಸಿಯೂ ಇದ್ದ ಅವಿಯೊಡನೆ (ಅವಿನಾಶ್ ಕಾಮತ್) ಆಗಾಗ ಈ ನಾಟಕದ ಬಗ್ಗೆ ಚರ್ಚಿಸಿದ್ದಿದೆ. ಅವಿಯೊಳಗಿನ ಕಲಾವಿದನ ಅಭಿನಯದ ತುಡಿತಕ್ಕೆ ಪಕ್ಕಾದ ‘ವಿಲೋಮ’ನ ಪಾತ್ರದ ಕನವರಿಕೆಯನ್ನು ಕೇಳಿ ಕೇಳಿ, ಈ ನಾಟಕ ಅಂದ್ರೆ ಕಾಳಿದಾಸ ಮತ್ತು ಮಲ್ಲಿಕಾ  ನಂತರ, ಮೊದಲು  ವಿಲೋಮ ಎಂದುಕೊಳ್ಳುವಷ್ಟು! 
‘ಆಷಾಢದ ಒಂದು ದಿನ’ವನ್ನು, ವಿಲೋಮನನ್ನು ರಂಗದ ಮೇಲೆ ಕಾಣುವ ಈ ಕನ್ನಡತಿಯ ಆಸೆ ಸಾಕಾರವಾಗಿದ್ದು ಮಾತ್ರ ತುಳುವಿನಲ್ಲಿ! :) 

*ಮೋಹನ್ ರಾಕೇಶ್ ಅವರ ಹಿಂದಿ ಮೂಲದ ನಾಟಕ ತುಳುವಿನಲ್ಲಿ ನಿನ್ನೆ ಮತ್ತು ಮೊನ್ನೆ ಬೆಂಗಳೂರಿನ (ದಿನಾಂಕ: ೨೬ ಮಾರ್ಚ್ ೨೦೧೫ ಹಾಗೂ ೨೭ ಮಾರ್ಚ್ ೨೦೧೫) ಕಲಾಗ್ರಾಮದಲ್ಲಿ ‘ಅನೇಕ’ ತಂಡ (ಸುರೇಶ್ ಆನಗಳ್ಳಿ ಅವರ ತಂಡ) ಮತ್ತು ದೃಶ್ಯ ತಂಡ ( ದಾಕ್ಷಾಯಣಿ ಭಟ್ ಅವರ ತಂಡ) ಆಯೋಜಿಸಿದ್ದು ಇಲ್ಲಿ ಫೇಸ್‍ಬುಕ್‍ನ ಒಂದಿಷ್ಟು ಸ್ನೇಹಿತರಿಗೆ ಗೊತ್ತೇ ಇದೆ. ಕಲಾಗ್ರಾಮದಲ್ಲಿ ಹೌಸ್‍ಫುಲ್ ಆಗಿ ಜನಮನ ಗೆದ್ದ ಮುಂಬೈನ ‘ಕಲಾಭಾರತಿ’ ತಂಡದ ಈ ನಾಟಕ ಕಲಾಸೌಧದಲ್ಲೂ ಜನ ಮೆಚ್ಚುಗೆ ಪಡೆದುಕೊಂಡಿತು.

ತುಳು ಭಾಷೆಯ ಆಂಡ್, ಬುಡ್ಚಿ, ಇಜ್ಜಿ ಯಂಥಹ ನಾಲ್ಕಾರು ಶಬ್ದಗಳನ್ನು ಬಿಟ್ಟರೆ, ಮೂರಡಿ ತಲೆ ಮೇಲಿಂದ ಹಾರುವ ಭಾಷೆ ಅದು ನನಗೆ! ಆದರೂ ಕನ್ನಡ ಅವತರಣಿಕೆಯನ್ನು ಮುಂಚೆಯೇ ಓದಿಕೊಂಡಿದ್ದೆನ್ನಲ್ಲಾ ಅದು ಈ ಹೊತ್ತಲ್ಲಿ ನೆರವಾಯಿತು. 

*ಉತ್ತಮ ನಿರ್ದೇಶನ (ಭರತಕುಮಾರ ಪೊಲಿಪು). 

*ಸಂಗೀತ ಮತ್ತು ಬೆಳಕುಗಳೂ ಉತ್ತಮವಾಗಿದ್ದವು. 

*ಸಂಗೀತ (ರಾಮಚಂದ್ರ ಹಡಪದ) ಸಂಭಾಷಣೆ ಜೊತೆ ಇನ್ನಷ್ಟು ಮಿಳಿತವಾಗಿದ್ದಲ್ಲಿ ಅಂದರೆ ವಾಕ್ಯಗಳ ನಡು ನಡುವೆ ಸಂಭಾಷಣೆಯ ಹಿನ್ನೆಲೆಯಾಗಿ ಬರಬೇಕಾದ ಆಲಾಪಗಳು, ಸ್ವರಗಳು,‘ಕೆಲವೆಡೆ’ಯಲ್ಲಿ ಜೊತೆಜೊತೆಗೆ ಬರುತ್ತಿದುದು ಮಾತುಗಳು ಪ್ರೇಕ್ಷಕರನ್ನು ತಲುಪುವಲ್ಲಿ ಸೋಲಿಸುತ್ತಿದ್ದವು. ತುಂಬಾ ಒಳ್ಳೆಯ ಸಂಗೀತ ಸಂಯೋಜನೆ, ಹಾಡುಗಾರಿಕೆ ಮತ್ತು ಧ್ವನಿ ರಾಮಚಂದ್ರ ಹಡಪದ್ ಅವರದು ಎನ್ನುವುದರಲ್ಲಿ ಎರಡು ಮಾತಿಲ್ಲ. 
ಮೊದಲನೇಯ ಬ್ಲಾಕ್ ಔಟ್‍ ಹೊತ್ತಲ್ಲಿ ಶುರುವಾಗುವ ಹಾಡು ಇನ್ನಷ್ಟು ವಿಷಾದದ ಧಾಟಿಯಲ್ಲಿರಬೇಕಿತ್ತು ಅಥವಾ ನನ್ನಂತೆ ಅಭಿಪ್ರಾಯ ಪಟ್ಟ, ತುಳು ಬಲ್ಲ ರಂಗಕರ್ಮಿಯೊಬ್ಬರ ಪ್ರಕಾರ ಹಾಡಿನ ಬದಲಿಗೆ ಹಮ್ಮಿಂಗ್ ಇದ್ದಿದ್ದರೆ ಸರಿಯಾಗಿರೋದು. (ಭಾಷೆ ಬಲ್ಲವರಿಗೆ ಹಾಡಿನ ಅರ್ಥ ಗೊತ್ತಾಗುವುದರಿಂದ ಗಮನ ಆ ಕಡೆ ಹರಿಯುವುದು ಸಹಜ. ಆದರೆ ಭಾಷೆ ಗೊತ್ತಿಲ್ಲದವರಿಗೆ ಅಷ್ಟೊತ್ತಿನ ದೃಶ್ಯ ಮಲ್ಲಿಕಾಳ ಅಗಲಿಕೆಯ ನೋವನ್ನೇ ಬದಿಗೊತ್ತಿದ ಸಂಭ್ರಮವನ್ನೂ ಮೀರಿಸಿ ಅಂಬಿಕಾಳ ವಿಷಾದ ಗಾಢವಾಗುವುದು ಅನುಭವಕ್ಕೆ ಬರುತ್ತಾದ್ದರಿಂದ ದೃಶದ ಕೊನೆಯಲ್ಲಿ ಶುರುವಾಗುವ ಹಾಡಿನ ರಾಗ ಮತ್ತು ಲಯ ವಿಷಾದಕ್ಕೆ ವ್ಯತಿರಿಕ್ತ ಅನಿಸುತ್ತವೆ ಮತ್ತು ಬ್ಲಾಕ್‍ಔಟ್‍ನಲ್ಲೇ ಹಾಡನ್ನು ಮೊಟಕುಗೊಳಿಸಿದಲ್ಲಿ  ಬ್ಲಾಕ್‍ಔಟ್ ದೀರ್ಘವಾಗುವುದನ್ನು ತಪ್ಪಿಸಬಹುದು ಅನಿಸಿತು ನನಗೆ. 
 ತಬಲಾ ಮತ್ತು ರಿದಂ‍ನಲ್ಲಿ ಹಡಪದ ಅವರಿಗೆ ಚೆಂದದಿಂದ ಸಾಥ್ ಕೊಟ್ಟವರು ಮುಂಬೈನ ಕಲಾವಿದ ಮನೋಜ್ ರಾವ್. 
*ನಾಟಕದ ಹೆಚ್ಚಿನ ಭಾಗ ಪ್ರಖರವಲ್ಲದ, ಹಳದಿ ಬೆಳಕೇ ಇತ್ತಾದರೂ ಅದು ಇಡೀ ನಾಟಕಕ್ಕೆ ಪೂರಕವಾಗಿತ್ತು (ಸಂಯೋಜನೆ: ಅರುಣಮೂರ್ತಿ, ನಿರ್ವಹಣೆ ರಜನಿಕಾಂತ್).  ಕಿಟಕಿಯನ್ನು ತುಂಬಾ ಚೆಂದವಾಗಿ, ಆಕರ್ಷಕವಾಗಿ ತೋರಿಸುತ್ತಿದ್ದ ಬೆಳಕು, ಪಾತ್ರಧಾರಿಗಳೆಲ್ಲ ಕಿಟಕಿ ಬಳಿ ಬಂದು ಮಾತನಾಡುವಾಗಲೆಲ್ಲ ಅವರ ಮುಖ ಸರಿ ಕಾಣದಂತೆ ಮಾಡಿಬಿಡುತ್ತಿತ್ತು. ಅಲ್ಲಿ ಬಂದಾಗಲೆಲ್ಲ ಪಾತ್ರಧಾರಿಗಳು ಬೆಳಕನ್ನು ತೆಗೆದುಕೊಳ್ಳಲು ಕಷ್ಟಪಡಬೇಕಿತ್ತು. ಅದಿಷ್ಟನ್ನು ಸರಿ ಮಾಡಿಕೊಂಡದ್ದಾದರೆ ಅಲ್ಲಿ ನಿಂತು ಮಾತಾಡುವ ಪತ್ರಧಾರಿಗಳ ಎಲ್ಲ ಮುಖ್ಯ ಮಾತುಗಳ ಜೊತೆಗಿನ ಮುಖಭಾವವೂ ಪ್ರೇಕ್ಷಕನಿಗೆ ತಲುಪಿ ಇನ್ನೂ ಗಾಢ ಅನುಭವವನ್ನು ಕೊಡಬಲ್ಲವು.

*ಒಂದೇ ಸ್ಥಳದಲ್ಲಿ (ಮಲ್ಲಿಕಾಳ ಮನೆ) ಇಡೀ ನಾಟಕ ನಡೆಯುತ್ತದೆ. ವಿಶ್ವೇಶ್ವರ ಪರ್ಕಳ ಅವರ ಕಲಾತ್ಮಕತೆಯ ಕುರಿತು ಎರಡು ಮಾತಿಲ್ಲ. ಅವರ ಮುಂಚಿನ ಹಲವಾರು ರಂಗವಿನ್ಯಾಸಗಳನ್ನೂ ನೋಡಿರುವೆ ನಾನು. ಚೆಂದವಾಗಿ, ನಾಟಕಕ್ಕೆ ಪೂರಕವಾಗಿ ವಿನ್ಯಾಸ ಮಾಡುತ್ತಾರೆ. ಈ ನಾಟಕದ ಮಲ್ಲಿಕಾಳ ಮನೆಯ ಬಡತನವನ್ನು ಇದೇ ವಿನ್ಯಾಸದಲ್ಲಿ ಬಿಂಬಿಸಬಹುದಾದ ಸಾಧ್ಯತೆಗಳಿನ್ನೂ ಇವೆ. ಪರ್ಕಳರಿಗೆ ಇದು ಅಸಾಧ್ಯವಾದುದೇನಲ್ಲ.

*ಪ್ರಸಾಧನ (ಮೋಹನ್) ಮತ್ತು ವೇಷ-ಭೂಷಣ (ದಾಕ್ಷಾಯಿಣಿ ಭಟ್) ಪಾತ್ರಕ್ಕೆ ತಕ್ಕುದಾಗಿದ್ದವು. (ಬಡತನದ ಮಲ್ಲಿಕಾಳ ಕೊರಳಲ್ಲಿ ಹೊಳೆಯುವ ಕಲ್ಲಿನ ಹಾರ ಮಾತ್ರ ಬೇಡವಾಗಿತ್ತು ಎನಿಸಿತು)

ಇನ್ನು.... :)

*ನನ್ನ ಮುಂಬೈ ಕಲಾವಿದ ಸ್ನೇಹಿತರ ಅಭಿನಯದ ತಾಕತ್ತಿನ ಕುರಿತು ಎರಡು ಮಾತಿಲ್ಲ! ಅವರುಗಳನ್ನು ಅವರೇ ಮೀರಿಸುತ್ತಿರುತ್ತಾರೆ ಒಂದು ಶೋದಿಂದ ಇನ್ನೊಂದು ಶೋನಲ್ಲಿ, ಒಂದು ನಾಟಕದಿಂದ ಇನ್ನೊಂದು ನಾಟಕದಲ್ಲಿ! ಬೆಂಗಳೂರಿನ ಎರಡೂ ದಿನದ ಪ್ರಯೋಗಗಳನ್ನು ನೋಡಿದವರಿಗೆ ಇದು ಮನದಟ್ಟಾಗಿರುತ್ತದೆ. 

@ ವಿಲೋಮನಾಗಿ ಅಭಿನಯಿಸಿದ ಅವಿನಾಶ್ ಕಾಮತ್ ಅವರಿಗೂ ತುಳು ಬಾರದು. ಅವಿಯ ಹಂಬಲ ಇನ್ನಾದರೂ ಈಡೇರಿಸಲೆಂಬಂತೆ ತುಳುವಿನಲ್ಲಿ ಅವತರಿಸಿದನೇನೋ ವಿಲೋಮ! :) ತುಳು ಬಲ್ಲವರೂ, 'ಊಂಹೂಂ ತುಳು ಬರೊಲ್ಲ ಅಂತ ಮಜಾಕ್ಮಾಡ್ತಿದ್ದೀರಿ ನೀವು!’ ಅನ್ನುವಷ್ಟರ ಮಟ್ಟಿಗೆ ಸುಲಲಿತವಾಗಿ ಮಾತನಾಡಿ ತುಳುವನ್ನು ಈ ನಾಟಕದಲ್ಲಿ ತಮ್ಮದಾಗಿಸಿಕೊಂಡ ಅವಿನಾಶ್, ಅದೇ ವಿಲೋಮನನ್ನು ಎರಡೂ ದಿನ ಭಿನ್ನ ಭಿನ್ನ ಆಯಾಮದಲ್ಲಿ ನೋಡುವಂತೆ ಅಭಿನಯಿಸಿ ಬೆರಗು ಮೂಡಿಸಿದರು! ಇನ್ನು ಭಾಷೆಯೆ ಅರಿಯದ ನನ್ನ ಮಟ್ಟಿಗೆ ತುಳುವಿನಲ್ಲಿ ಮತ್ತು ‘ವಿಲೋಮ’ನಾಗಿ ಅವಿಗೆ ಫಸ್ಟ್ ರ್ಯಾಂಕ್! :)

@ ಕಾಳಿದಾಸನ ಪಾತ್ರದಲ್ಲಿ ಮೋಹನ್ ಮಾರ್ನಾಡ್: ಅಭಿನಯ ಇವರಿಗೆ ನೀರು ಕುಡಿದಷ್ಟು ಸರಾಗ! ಧ್ವನಿಯ ಏರಿಳಿತವನ್ನು ಚೆನ್ನಾಗಿ ಬಲ್ಲ ಮೋಹನ್ ಸ್ವಲ್ಪ ಗಟ್ಟಿಯಾಗಿ (ಧ್ವನಿಯ ವಾಲ್ಯೂಮ್ ಹೆಚ್ಚು ಮಾಡಿ) ಮಾತನಾಡಿದ್ದರೆ ಕಾಳಿದಾಸನ ಗೊಣಗುವಿಕೆಯೂ ಪ್ರೇಕ್ಷಕರನ್ನು ತಲುಪುತಿತ್ತು. 

@ ಮಲ್ಲಿಕಾ ಆಗಿ ಸುಧಾ ಶೆಟ್ಟಿ  ಮೂರನೇಯ ಅಂಕದಲ್ಲಿ ಸೂಪರ್ಬ್ (ಇವರೂ ಸಹ ಧ್ವನಿಯ ವಾಲ್ಯೂಮ್ ಎತ್ತರಿಸಿಕೊಳ್ಳಬೇಕು). 

@ ಅಂಬಿಕಾ ಆಗಿ ಶೈಲಿನಿ ರಾವ್ ತುಂಬಾ ಚೆನ್ನಾಗಿ ಅಭಿನಯಿಸಿದರು. ಬೆಳದ ಮಗಳಿಗೆ ಹೆಚ್ಚಿಗೆ ಹೇಳಲಾಗದ ಸಂಕಟ, ಅವಳ ಬಾಳು ಕಲ್ಪನಾಲೋಕದಲ್ಲೇ ಕಳೆದು ಹೋಗುತ್ತಿರುವುದನ್ನು ನೋಡಲಾಗದ ತಳಮಳ, ಅಸಹಾಯಕತೆಗಳನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸಿದರು.

॒ ಮಾತುಲಾ ಆಗಿ ಹಿರಿಯ ಕಲಾವಿದರಾದ ಕೆ.ವಿ.ಆರ್ ಐತಾಳ್ ತಮ್ಮ ಎಂದಿನ ಸಹಜ ನಟನೆಯ ಮೂಲಕ ಪುಟ್ಟ ಪಾತ್ರವಾದರೂ ಮನ ಗೆಲ್ಲುತ್ತಾರೆ.

@ ದಂತುಲ ಮತ್ತು ಅನುಸ್ವಾರನಾಗಿ ನನ್ನ ತಮ್ಮ ಸುರೇಂದ್ರಕುಮಾರ ಮಾರ್ನಾಡ್/ ಸೂರಿ : ನಿರ್ದೇಶಕರ ನಟ ಸೂರಿ. ಹೇಗೆ ಮೋಲ್ಡ್ ಮಾಡ್ತಾರೊ ಹಾಗೆ ಹೊಂದಿಕೊಳ್ಳುವ ತಾಕತ್ತಿನ ಫ್ಲೆಗ್ಸಿಬಲ್ ನಟ. (ವಿಭಿನ್ನ ಪಾತ್ರಗಳು ಸಿಗಬೇಕಿದೆ ಸೂರಿಗೆ) , ನಿಕ್ಷೇಪ ಮತ್ತು ಅನುಸಾರನಾಗಿ ಲತೇಶ್ ಪೂಜಾರಿ (ಈ ಹುಡುಗನ ಅಭಿನಯದ ಬಗ್ಗೆ ಕೇಳಿದ್ದೆ, ಈ ನಾಟಕದಲ್ಲಿ ಇರುವ ಇಷ್ಟಿಷ್ಟೇ ಅವಕಾಶಗಳನ್ನೂ ಚೆಂದವಾಗಿ ಬಳಸಿಕೊಂಡು ನಾನು ಕೇಳಿದ್ದು ಸರಿ ಅನ್ನುವುದನ್ನು ಮನದಟ್ಟು ಮಾಡಿಸಿದ) ಇಬ್ಬರೂ ತಮ್ಮ ಎರಡೂ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. 

@ ರಾಜಕುಮಾರಿ ಪ್ರಿಯಾಂಗುಮಂಜರಿಯಾಗಿ ಕೃಪಾ ಪೂಜಾರಿ ಅವರು, ಮಾತುಗಳಲ್ಲಿ ನೋಟದಲ್ಲಿ ಗೆದ್ದರೂ ಇನ್ನೊಂಚೂರು ಗತ್ತು ಮತ್ತು ನಡಿಗೆಯ ಗಾಂಭಿರ್ಯ ಇದ್ದಿದ್ರೆ ಇನ್ನೂ ಚೆನ್ನಾಗಿರೋದು ಅನಿಸಿತು.

"ವಿಲೋಮ ಯಾರು? ಒಬ್ಬ ಅಯಶಸ್ವಿ ಕಾಳಿದಾಸ.... 
ಕಾಳಿದಾಸ ಯಾರು? ಒಬ್ಬ ಯಶಸ್ವೀ ವಿಲೋಮ!" 
(ಇದೇ ನಾಟಕದಲ್ಲಿನ ಸಾಲು ಇದು)

- ಜಯಲಕ್ಷ್ಮೀ ಪಾಟೀಲ್

Monday, October 1, 2012

ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ - ಸಾಕ್ಷ್ಯಚಿತ್ರ, ‘ಬಿ.ವಿ ಕಾರಂತ (ಬಾಬಾ)

ಬಿ.ವಿ.ಕಾರಂತ




ಅಂದು ಸೆಪ್ಟಂಬರ್ 1, 2002, ಮುಂಬೈನ ಕರ್ನಾಟಕ ಸಂಘದಲ್ಲಿ ‘ಮಹಾಮಾಯಿ ನಾಟಕದ ರಿಹರ್ಸಲ್‌ನಲ್ಲಿದ್ದೆ. ನಾಟಕದ ನಿರ್ದೇಶಕರು, ಬಿ.ವಿ. ಕಾರಂತರು ಇನ್ನಿಲ್ಲ ಎಂಬ ಸಿಡಿಲಿನ ಸುದ್ದಿ ತಿಳಿಸಿದರು. ಒಮ್ಮೆಯಾದರೂ ಕಾರಂತರನ್ನು ನೋಡಬೇಕು, "ನಿಮ್ಮ ನಾಟಕದಲ್ಲಿ ಪುಟ್ಟದಾದರೂ ಪರವಾಗಿಲ್ಲ ನನಗೊಂದು ಪಾತ್ರ ಕೊಡಿ"  ಎಂದು ಅವರಲ್ಲಿ ಕೇಳಿಕೊಂಡು ಅವರ ನಾಟಕದಲ್ಲಿ ಅಭಿನಯಿಸಬೇಕು ಎಂದು ಕಂಡ ಕನಸು, ನನಸು ಮಾಡಿಕೊಳ್ಳುವ ಮುನ್ನವೇ ಕರಗಿ ಹೋಗಿತ್ತು... ಮುಂದೆ ಬೆಂಗಳೂರಿಗೆ ಬಂದ ಮೇಲೆ ಕಾರಂತರು ನಿರ್ದೇಶಿಸಿದ್ದ ಮೂರು ನಾಟಕಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಎರಡು ದಿನಗಳ ಕಾಲ ಕಾರಂತರ ಮನೆಯಲ್ಲಿ ನಾಟಕವೊಂದರ ರಿಹರ್ಸಲ್ ಮಾಡಿ,  ಪ್ರೇಮಾ ಕಾರಂತರೊಂದಿಗೆ, ಕಾರಂತರ ನಾಯಿ ‘ನಿಂಜ’ನೊಂದಿಗೆ ಒಡನಾಡಿ ಅಷ್ಟರ ಮಟ್ಟಿಗೆ ಧನ್ಯತೆ ಅನುಭವಿಸಿದೆ. ವೈದೇಹಿಯವರ ಬರಹದಲ್ಲಿ ಮೂಡಿ ಬಂದ ಕಾರಂತರ ಆತ್ಮಕಥನ  ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಓದಿ ಕಾರಂತರನ್ನು ಇನ್ನಷ್ಟು ತಿಳಿದುಕೊಂಡೆ ಎಂದು ಸಮಾಧಾನ ಪಟ್ಟುಕೊಂಡೆ.
ನಿರ್ದೇಶಕ ರಾಮಚಂದ್ರ ಪಿ.ಎನ್
    ಈಗ, ತಮ್ಮ ತುಳು ಚಿತ್ರ ‘ಸುದ್ದಕ್ಕೆ  ೨೦೦೬ರ ‘ಓಶಿಯನ್ ಸಿನಿಫ್ಯಾನ್ ಫೆಸ್ಟಿವಲ್ ಆಫ್ ಏಶಿಯನ್ ಫಿಲ್ಮ್ಸ್ನಲ್ಲಿ ‘ಬೆಸ್ಟ್ ಇಂಡಿಯನ್ ಫಿಲ್ಮ್’ ಪ್ರಶಸ್ತಿ ಹಾಗೂ ೨೦೦೯ರಲ್ಲಿ ‘ಪುಟಾಣಿ ಪಾರ್ಟಿ’ ಎಂಬ ಕನ್ನಡ ಮಕ್ಕಳಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಪಡೆದ ನಿರ್ದೇಶಕ ರಾಮಚಂದ್ರ ಪಿ.ಎನ್ ಅವರು ನಿರ್ದೇಶಿಸಿದ ‘ ಬಿ ವಿ ಕಾರಂತ (ಬಾಬಾ’ ಚಿತ್ರ ನೋಡಿದ ಮೇಲೆ ನನಗೆ ಗೊತ್ತಿದೆ ಅಂದುಕೊಂಡಿದ್ದು ತುಂಬಾ ಕಡಿಮೆ ಇತ್ತು ಎಂದರಿವಾಯಿತು, ನನಗಷ್ಟೇ ಅಲ್ಲ, ಕಾರಂತರನ್ನು ಬಲ್ಲೆ ಎನ್ನುವವರಿಗೂ ಈ ಸಾಕ್ಷ್ಯಚಿತ್ರವನ್ನು ನೋಡಿದ ಮೇಲೆ ಇದೇ ಅನುಭವವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

  ಈ ಚಿತ್ರದ ಹೆಗ್ಗಳಿಕೆ ಎಂದರೆ ಥೇಟ್ ಕಾರಂತರ ಧಾಟಿಯಲ್ಲೇ ಅಂದರೆ ಕಾರಂತರು ಹೇಗೆ ಪ್ರಕೃತಿದತ್ತವಾದ, ಸಹಜವಾದ ಧ್ವನಿಗಳನ್ನು ಸಂಗೀತವಾಗಿಸಿಕೊಂಡು, ದಿನನಿತ್ಯದ ಬಳಕೆಯ ವಸ್ತುಗಳನ್ನು ವಾದ್ಯವಾಗಿಸಿಕೊಂಡು, ವಾದ್ಯಪರಿಕರಗಳೊಡನೆ ಮೇಳೈಸಿ ರಂಗಗೀತೆಗಳಿಗೆ ಹೊಸ ಆಯಾಮ ಕೊಟ್ಟರೋ, ದೇಸಿ ಸೊಗಡನ್ನು ಶೆಕ್ಸ್‌ಪಿಯರ್‌ನ ನಾಟಕಗಳಿಗೆ ಅಳವಡಿಸಿ ಅನ್ಯ ಸಂಸ್ಕೃತಿಯನ್ನು ಆಪ್ತವಾಗಿಸಿದರೋ,  ಅದಕ್ಕೆ ತಕ್ಕುದಾಗಿ ನಿರ್ದೇಶಕ ರಾಮಚಂದ್ರ ಪಿ.ಎನ್ ಅವರು ಈ ಚಿತ್ರಕ್ಕೆ ತೀರ ಅನಿವಾರ್ಯವಾದಷ್ಟೇ ಕೃತ್ರಿಮ ಬೆಳಕಿನೊಡನೆ ಆದಷ್ಟು ಸಹಜ ಬೆಳಕನ್ನು ಬಳಸಿಕೊಂಡು ಚಿತ್ರೀಕರಿಸಿ, ರೂಪಕದ ರೀತಿಯಲ್ಲಿಯ ದೃಶ್ಯ ಸಂಯೋಜಿಸಿ, ಅಲ್ಲಲ್ಲಿ ಕಾರಂತರ ಸಂಗೀತ ಸಂಯೋಜನೆಯ ಹಾಡುಗಳನ್ನು ಬಳಸಿ ಪಕ್ಕಾ ಕಾರಂತ ಚಿತ್ರವಾಗಿಸಿದ್ದಾರೆ. ರಾಮಚಂದ್ರ ಪಿ.ಎನ್ ಅವರ ಈ ಚಿತ್ರಕ್ಕೂ ಸಮೀರ್ ಮಹಜನ್ ಅವರ ಛಾಯಾಗ್ರಹಣವಿದೆ.

 ರಂಗಮಂಚದ ಬೆಳಕಿನ ಸಂಯೋಜನೆಯ ದೃಶ್ಯದೊಂದಿಗೆ ತೆರೆದುಕೊಳ್ಳುವ ಈ ಸಿನಿಮಾ, ವೈದೇಹಿಯವರು ರಚಿಸಿದ ಕಾರಂತರ ಬದುಕಿನ ಬರಹ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ಯನ್ನು ಆಧರಿಸಿದ್ದರೂ ಸಹ ಕಾರಂತರ ಅನೇಕ ಒಡನಾಡಿಗಳ, ಆಪ್ತರ, ಮನೆಯ ಜನರ, ಶಿಷ್ಯರ ಮಾತಿನ ಮುಖಾಂತರ, ಕಾರಂತರ ಬದುಕನ್ನು ಅನಾವರಣಗೊಳಿಸುತ್ತಾ, ಕಾರಂತರು ಸಂಚರಿಸಿ ಸಂಚಲನವನ್ನುಂಟು ಮಾಡಿದ ಪ್ರದೇಶಗಳಿಗೆಲ್ಲ ಭೇಟಿ ನೀಡುತ್ತಾ ಅಲ್ಲಿ ಉಳಿದು ಬೆಳೆಯುತ್ತಿರುವ ಕಾರಂತರ ಛಾಪನ್ನು ನಮ್ಮ ಮನದಲ್ಲೂ ಅಳಿಯದಂತೆ ಅಚ್ಚು ಹಾಕುವಲ್ಲಿ ಸಿನಿಮಾ ಸಂಪೂರ್ಣ ಯಶಸ್ವಿಯಾಗುತ್ತದೆ.

ಹಿಂದಿಯ ಖ್ಯಾತ ನಾಟಕಕಾರ ಜಯಶಂಕರ್ ಪ್ರಸಾದ್ ಅವರ ನಾಟಕಗಳನ್ನು ಅವುಗಳ ಗಾತ್ರ ಹಾಗೂ ಅವುಗಳಲ್ಲಿನ ವಿವರಣಾಕ್ರಮದಿಂದಾಗಿ ಹಿಂದಿ ಭಾಷೆಯ ಜನರೇ ರಂಗಕ್ಕೆ ತರಲು ಹೆದರುತ್ತಿದ್ದಂಥ ವೇಳೆಯಲ್ಲಿ ಕಾರಂತರು ಅವುಗಳನ್ನು ಪ್ರಯೋಗಿಸಿದ್ದನ್ನು ನೆನಪಿಸಿಕೊಳ್ಳುವ ಕಾಶಿನಾಥ್ ಸಿಂಗ್,
‘ಚಾಣಕ್ಯ ನಾಟಕದಲ್ಲಿ ಚಾಣಕ್ಯನ ಪಾತ್ರವಹಿಸಲು ಘಟಾನುಘಟಿ ನಟರೆಲ್ಲ ಸಾಲಾಗಿ ಮುಂದಾದಾಗ ನಟನೇ ಅಲ್ಲ ಎನ್ನಿಸಿದ್ದ ನಟನೊಬ್ಬನಿಂದ ಆ ಪಾತ್ರ ಮಾಡಿಸಿ, ಇವನ ಹೊರತು ಅನ್ಯರು ಚಾಣಕ್ಯನ ಪಾತ್ರಕ್ಕೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದು ಜನ ಮಾತಾಡಿಕೊಳ್ಳುವಂತೆ ಆ ನಟನನ್ನು ಕಾರಂತರು ತಯಾರು ಮಾಡಿದನ್ನು ಮೆಲುಕು ಹಾಕುವ ಕುವರ್ಜಿ ಅಗರ್ವಾಲ್,
ಇರುವ ವಾದ್ಯಗಳನ್ನೇ ಬೇರೆ ರೀತಿಂiiಲ್ಲಿ ಪ್ರಯೋಗಿಸಲು ಆ ಮುಖಾಂತರ ಸಂಗೀತಕ್ಕೆ ಹೊಸತನವನ್ನು ನೀಡಿ ಅಚ್ಚರಿಮೂಡಿಸುತ್ತಿದ್ದ ಕಾರಂತರ ಕುರಿತು ಮಾತಾಡುವ ನೀಲಮ್ ಮಾನ್ ಸಿಂಗ್,
ಎನ್ ಎಸ್ ಡಿಯ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತಿದ್ದ ರೀತಿಯ ಕುರಿತು ಮಾತಾಡಿರುವ ಕೀರ್ತಿ ಜೈನ್, ಅನುರಾಧಾ ಕಪೂರ್,
ಇದ್ದ ಸ್ಥಳವನ್ನೇ ಕಾರಂತರು ನಾಟಕಕ್ಕೆ ಹೇಗೆ ಅನುಕೂಲ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ನೆನಪಿಸಿಕೊಳ್ಳುವ ಶ್ರೀನಿವಾಸ್ ಜಿ ಕಪ್ಪಣ್ಣ,
ಕಾರಂತರ ಸಿನಿಮಾ ನಂಟಿನ ಕುರಿತು ಮಾತಾಡಿದ ಗಿರೀಶ್ ಕಾರ್ನಾಡರು, ಕಾಸರವಳ್ಳಿಯವರು,
ತಮ್ಮ ಮೃದುದನಿಯಲ್ಲಿ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆಯ ಕೆಲವು ಪುಟಗಳನ್ನು ಓದುವ ವೈದೇಹಿ ಮತ್ತು ಅನೇಕ ಹಿರಿಕಿರಿಯ ರಂಗಕರ್ಮಿಗಳು...
ಹೀಗೆ ದೇಶದ ಉದ್ದಗಲಕ್ಕೂ ಸಂಚರಿಸಿ ಕಾರಂತರ ಒಡನಾಡಿಗಳನ್ನು ಮಾತಾಡಿಸಿ, ಆ ಮೂಲಕ ಕಾರಂತರನ್ನು ಪರಿಚಿಯಿಸುವುದು ಮತ್ತು ಚಿತ್ರೀಕರಿಸಿದ್ದನ್ನು ಕ್ರಮಬದ್ಧವಾಗಿ, ಅಚ್ಚುಕಟ್ಟಾಗಿ ಹೊಂದಿಸಿ ಪ್ರಸ್ತುತಪಡಿಸಿವುದರ ಹಿಂದಿನ ಪರಿಶ್ರಮದ ಸಾರ್ಥಕತೆ ಈ ಚಿತ್ರ ನೀಡುವ ಗಾಢ ಅನುಭವದಲ್ಲಿ ಕಂಡುಬರುತ್ತದೆ.
ಚಿತ್ರೀಕರಣದ ವೇಳೆಯಲ್ಲಿ ನಿರ್ದೇಶಕ ರಾಮಚಂದ್ರ ಪಿ.ಎನ್, ಛಾಯಾಗ್ರಾಹಕ ಸಮೀರ್ ಮಹಜನ್ ಮತ್ತು ರಂಗಕರ್ಮಿ ಇಕ್ಬಾಲ್ ಅಹೆಮದ್.
  ಕಣ್ಣೆದುರೇ ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ತನ್ನ ಆಸೆ, ಕನಸು, ದುಗುಡಗಳೊಡನೆ ಏರು ದಾರಿಯಲ್ಲಿ ನಡೆಯುತ್ತಾ ನಡೆಯುತ್ತಾ ಮೇರುಪರ್ವತವಾದ ಬೆರಗು, ಇನ್ನೊಬ್ಬ ಕಾರಂತ ಬೇಕು ಎಂಬ ತುರ್ತಿನ ಹಂಬಲ ಮನಸನ್ನು ಆವರಿಸಿಕೊಳ್ಳುತ್ತವೆ. ‘ಫಿಲ್ಮ್ ಡಿವಿಜನ್ನ ನಿರ್ಮಾಣದ, ೯೩ ನಿಮಿಷದ ಬಿ ವಿ ಕಾರಂತರ ಕುರಿತ ಈ ಸಾಕ್ಷ್ಯಚಿತ್ರ ‘ಬಿವಿ ಕಾರಂತ (ಬಾಬಾ), ಕೇವಲ ಕನ್ನಡಿಗರಿಗೆ ಕನ್ನಡ ರಂಗಭೂಮಿಗೆ ಮಾತ್ರವಲ್ಲ, ಇಡೀ ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ.
ಈ ಅಪರೂಪದ ಚಿತ್ರವನ್ನು ನೋಡಬಯಸುವವರು ಫಿಲ್ಮ್ ಡಿವಿಜನ್ನ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

1) Officer in-charge of Distributiondho@filmsdivision.org
 Phone: 022-23512670

2) Nodal Officer
nodalofficerit@filmsdivision.org


ವೈದೇಹಿಯವರ ಬರಹದಲ್ಲಿ ಬಿ ವಿ ಕಾರಂತರ ಬದುಕು ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’

                                                                                                          -ಜಯಲಕ್ಷ್ಮೀ ಪಾಟೀಲ್.

Sunday, May 8, 2011

ಏನಾದರೂ ಬರೆಯಬೇಕು ಅಂದುಕೊಳ್ಳುತ್ತಲೇ ತುಂಬಾ ದಿನಗಳನ್ನು ಹಾಗೆಯೇ ಕಳೆದಾಯಿತು. ಮೊನ್ನೆ vijayanext ಪತ್ರಿಕೆಯಲ್ಲಿ ನನ್ನ ಈ ಬರಹ ಪ್ರಕಟಗೊಂಡಾಗ ಅಂದುಕೊಂಡೆ, ಈ ಬರಹದಿಂದಲೇ ನನ್ನ 'ಅಭಿನಯ' ಬ್ಲಾಗಿನ ಪಯಣ ಶುರು ಮಾಡುವುದು ಅಂತ. ಇಗೋ ಇಲ್ಲಿದೆ ನನ್ನ ಆ ಲೇಖನ. ಓದಿ ಮುಲಾಜಿಲ್ಲದ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿದ್ದೇನೆ. ಈ ಮಾತು ನನ್ನ ಎಲ್ಲ ಬರಹಗಳಿಗೂ ಅನ್ವಯಿಸುತ್ತದೆ. :)
  ಈ ಬರಹ vijayanext ಪತ್ರಿಕೆಯಲ್ಲಿ ದಿನಾಂಕ : 06-05-2011 ಶುಕ್ರವಾರದಂದು ಪ್ರಕಟಗೊಂಡಿದೆ.  

http://www.vijayanextepaper.com/svww_zoomart.php?Artname=20110506a_014101002&ileft=45&itop=104&zoomRatio=130&AN=20110506a_014101002


ನಾನು ಅಭಿನಯಿಸಲು ಪ್ರಾರಂಭಿಸಿದ್ದು ಕನ್ನಡ ನಾಟಕಗಳಲ್ಲಿ. ನಂತರ ಟಿವಿ ಎಂಬ ಪುಟ್ಟ ಮಾಯಾಲೋಕ. ರಂಗಭೂಮಿಯಲ್ಲಿ ಪಾತ್ರಧಾರಿ ಯಾವುದೇ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಅಪಾಯವಿಲ್ಲದ್ದರಿಂದ ಅಲ್ಲಿರುವ ಕಲಾವಿದರು ಆ ಮಟ್ಟಿಗೆ ನಿರಾಳ! ರಂಗಭೂಮಿಯಲ್ಲಿ ಕೆಲವು ಪಾತ್ರಕ್ಕೆ ಇಂಥ ವ್ಯಕ್ತಿಯನ್ನು ಬಿಟ್ಟರೆ ಬೇರೆಯವರನ್ನು ಕಲ್ಪಿಸಿಕೊಳ್ಳಲಾಗದು ಎನ್ನುವ ಮಾತನ್ನು ನೀವು ಕೇಳಿದ್ದರೆ ಅದು ಆಯಾ ಕಲಾವಿದರ ಸಾಮರ್ಥ್ಯವನ್ನು ಸೂಚಿಸುವಂಥದ್ದಾಗಿರುತ್ತದೆಯೇ ಹೊರತು ಆ ಕಲಾವಿದರನ್ನು ಅಂಥ ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸುವಂಥದ್ದಾಗಿರುವುದಿಲ್ಲ. ಬೇರೆ ನಾಟಕಗಳಲ್ಲಿ ಅದೇ ವ್ಯಕ್ತಿಯನ್ನು ಆಯಾ ಪಾತ್ರವಾಗಿ ಪ್ರೇಕ್ಷಕರು ಗುರುತಿಸುತ್ತರೆಯೆ ವಿನಃ ಮತ್ತೊಂದನ್ನು ಯೋಚಿಸುವುದಿಲ್ಲ. ಹೀಗಾಗಿ ರಂಗಭೂಮಿಯ ಕಲಾವಿದರು ಈ ವಿಷಯದಲ್ಲಿ ನಿರಾಳ ಎಂದೇ ಹೇಳಬೇಕು.
    ಅಂಥ ಒಂದು ನಿರಾಳತೆಯನ್ನು ಮೈಗೂಡಿಸಿಕೊಂಡ ನಾನು ಟಿವಿ ಧಾರಾವಾಹಿಯಲ್ಲಿ ಮೊದಲಿಗೇನೇ ತಾಯಿಯ ಪಾತ್ರಕ್ಕೆ ಕರೆ ಬಂದಾಗ ಯಾವ ಅಳುಕೂ ಇಲ್ಲದೇನೇ ಖುಷಿ ಖುಷಿಯಿಂದ ಒಪ್ಪಿಕೊಂಡೆ, ಇದೇ ಪಾತ್ರವೇನು ಕೊನೆಯದಲ್ಲವಲ್ಲ ಎಂದು. ತಪ್ಪು ಮಾಡಿದೆನಾ…?
  ಆಗ ಹೀಗೆಂದು ಅನ್ನಿಸಲೇ ಇಲ್ಲ. ನಂತರ ಸಾಲಾಗಿ ಅಮ್ಮ ಇಲ್ಲವೆ ಅತ್ತೆಯ ಪಾತ್ರಗಳಷ್ಟೇ ಅರಸಿಕೊಂಡು ಬಂದವು ನೋಡಿ, ಕಂಗಾಲಾಗಿ ಹೋದೆ!! ನನಗೇ ಗೊತ್ತಿಲ್ಲದಂತೆ ಪ್ರಮೋಶನ್ ಇಲ್ಲದಂಥ ಪಾತ್ರಗಳಿಗೆ ನನ್ನನ್ನು ಒಪ್ಪಿಸಿಕೊಂಡಾಗಿತ್ತು. ಇಲ್ಲಿ ಪ್ರಮೋಶನ್ ಅಂದರೆ ಪಾತ್ರ ವೈವಿಧ್ಯತೆ. ಮಗಳು, ನಾಯಕಿ, ಖಳನಾಯಕಿ, ಅಕ್ಕ, ಅತ್ತಿಗೆ, ಇತ್ಯಾದಿ ಇತ್ಯಾದಿ  ವೈವಿಧ್ಯಮಯ ಪಾತ್ರಗಳನ್ನು ಮಾಡುವ, ಆ ಮೂಲಕ ಆಯಾ ಭಾವನೆಗಳನ್ನು ಅಭಿನಯಿಸುವ ಅವಕಾಶದಿಂದ ವಂಚಿತಳಾದ ಭಾವ ತುಂಬಾ ದಿನಗಳವರೆಗೆ ಆವರಿಸಿಕೊಂಡಿತ್ತು. ಒಂದಿಷ್ಟು ದಿನ ಈ ಧಾರಾವಾಹಿಗಳ ಸಹವಾಸವೇ ಬೇಡ ಎಂದು ದೂರವಿರುವ ಪ್ರಯತ್ನವನ್ನೂ ಮಾಡಿದೆ. ಆಗ ‘ಕಸ್ತೂರಿ ನಿವಾಸ’ ಎಂಬ ಧಾರವಾಹಿಯಲ್ಲಿ ನನ್ನತ್ತೆಯ ಪಾತ್ರ ಮಾಡುತ್ತಿದ್ದ ಹಿರಿಯ ನಟಿ ಬಿ.ವಿ.ರಾಧಾ ಅವರು ಸೆಟ್ಟಲ್ಲಿ ನನ್ನನ್ನು ಕೂರಿಸಿಕೊಂಡು “ನೋಡಿ, ಈಗೇನೊ ನೀವು ನಿಮ್ಮ ವಯಸ್ಸಿಗೆ, ಸಾಮರ್ಥ್ಯಕ್ಕೆ ತಕ್ಕಂತ ಪಾತ್ರ ಬೇಕು ಅಂತ ಬಂದ ಅವಕಾಶಾನ ಕೈ ಬಿಟ್ಟ್ರಿ ಅಂದ್ಕೊಳ್ಳಿ. ಅಂಥ ಅವಕಾಶಕ್ಕಾಗಿ ಕಾಯ್ತಾ ಕಾಯ್ತಾ ನಿಮಗೆ ನಿಜಕ್ಕೂ ಅಮ್ಮ, ಅತ್ತೆಯ ಪಾತ್ರಗಳನ್ನೇ ಮಾಡುವಷ್ಟು ವಯಸ್ಸಾಗಿಬಿಡುತ್ತೆ. ಆಗ ಬಂದ ಅವಕಾಶಗಳನ್ನ ತಿರಸ್ಕರಿಸದೆ ಮಾಡಿದ್ದರೇನೆ ಒಳ್ಳೆಯದಿತ್ತು ಅನ್ನಿಸೋಕೆ ಶುರುವಾಗುತ್ತೆ. ಅದರ ಬದಲು ಬಂದ ಪಾತ್ರಗಳನ್ನು ಒಪ್ಕೊಂಡು ಸುಮ್ಮನೆ ಅಭಿನಯಿಸ್ತಾ ಇರಿ” ಎಂದು ತಿಳಿ ಹೇಳಿದರು.
   ಆಗ “ಹೌದಲ್ವಾ!” ಎಂದು ಅವರ ಮಾತನ್ನು ಒಪ್ಪಿಕೊಂಡ ಮನಸು ಮತ್ತೆ ಇನ್ನ್ಯಾವುದೋ ಧಾರಾವಾಹಿಯಲ್ಲಿ ತಾಯಿಯ ಪಾತ್ರಕ್ಕೆ ಕರೆ ಬಂದಾಗ ರಚ್ಚೆ ಹಿಡಿಯಿತು, ಸಾಧ್ಯವಿಲ್ಲ ಎಂದು. ಗಾಯದ ಮೇಲೆ ಬರೆ ಎಂಬಂತೆ ತಾಯಿಯ ಪಾತ್ರ ಸಾಲದು ಅಂತ ಬರೀ ಒಳ್ಳೆಯ ತಾಯಿ ಅಥವಾ ಒಳ್ಳೆಯ ಅತ್ತೆಯ ಪಾತ್ರಗಳಿಗಾಗಿಯೇ ಆಹ್ವಾನ!! ಏನಿರುತ್ತೆ ಅಂಥ ಪಾತ್ರಗಳಲ್ಲಿ ಛಾಲೆಂಜು?! ತಾನೂ ಅಳ್ತಾ, ಅಳುತ್ತಲೇ ಮನೇಲಿದ್ದ ಎಲ್ಲರನ್ನೂ ಸಮಾಧಾನಿಸುತ್ತಾ ಸಹನಶೀಲೆ, ದಯಾಮಯಿ,ತ್ಯಾಗಿ, ಮೃದುಭಾಷಿಣಿ ರೂಪದ ಪಾತ್ರಗಳು ನನ್ನ ಸಹನೆಯನ್ನು ಪರೀಕ್ಷಿಸುತಿದ್ದವು. ಬಂದಂಥ ಅಂಥ ಹಲವಾರು ಪಾತ್ರಗಳನ್ನು ನಯವಾಗಿ ನಿರಾಕರಿಸಿದೆ. ಹಾಗಂತ ಖಳ ಪಾತ್ರಗಳು ಮಾತ್ರ ಛಾಲೆಂಜಿಂಗ್ ಅಂತೇನೂ ನನ್ನ ಅನಿಸಿಕೆ ಅಲ್ಲ.  ಅಮ್ಮ ಅಥವಾ ಅತ್ತೆಯ ಪಾತ್ರವಾದರೂ ಪಾತ್ರಗಳಲ್ಲಿ ವೈವಿಧ್ಯತೆ ಇರಬೇಕು, ಅಭಿನಯಕ್ಕೆ ಅವಕಾಶವಿರಬೇಕು ಎಂದು ಬಯಸುತ್ತಿದ್ದೆ. For a change ಕೆಟ್ಟ ಅಮ್ಮ, ಇಲ್ಲವೆ ಅತ್ತೆಯ ಪಾತ್ರವಾದರೂ ಕೊಡಿ ಎಂದು ಕೇಳಿದರೆ ಎದುರಿನವರು ವಿನಯದಿಂದ “ ಇಲ್ಲ ಮೇಡಂ, ನಿಮ್ಮ ಮುಖದಲ್ಲಿ ಅಂಥ ಒರಟುತನವಿಲ್ಲ. ಸೌಮ್ಯ ಮುಖ ನಿಮ್ಮದು. ನಿಮಗೆ ಇಂಥ ಪಾತ್ರಗಳೇ ಒಪ್ಪೋದು, ಪ್ಲೀಸ್ ಒಪ್ಕೊಳ್ಳಿ” ಎಂದು ನನ್ನ ಸಾಧು ಮುಖವನ್ನು ನನ್ನಿದಿರು ಹಿಡಿದು ಸುಮ್ಮನಾಗಿಸಿಬಿಡುತ್ತಿದ್ದರು. ಇದೆಲ್ಲದರ ಜೊತೆಗೆ ನನ್ನ ಮಕ್ಕಳು ಅಥವಾ ಅಳಿಯಂದಿರ ಮಾತ್ರ ಮಾಡುವ ಕಲಾವಿದರು ನನ್ನ ತಮ್ಮನ ವಯಸ್ಸಿನವರೋ ಇಲ್ಲವೇ ನನ್ನ ವಯಸ್ಸಿನವರೋ ಇರುತ್ತಿದ್ದುದು ಕಲಾವಿದೆಯನ್ನು ಮೀರಿದ ನನ್ನೊಳಗಿನ ಜಯಲಕ್ಷ್ಮೀಯನ್ನು ಕೆಣಕುತ್ತಿತ್ತು! ಹಾಗೆಂದೇ ಪ್ರಕಟವಾಗಿಯೇ ಗೊಣಗುತ್ತಿದ್ದೆ ಕೂಡಾ... “ನನ್ನ ಮಕ್ಕಳಿನ್ನೂ ಹೈಸ್ಕೂಲೂ ಕಂಡಿಲ್ಲ, ಧಾರಾವಾಹಿಗಳಲ್ಲಿ ಮಾತ್ರ ಆಗಲೇ ನನ್ನ ಮಕ್ಕಳಿಗೆ ಮದುವೆ, ಬಸಿರು,ಬಾಣಂತನ… ಛೆ!”
  ಗೊಣಗುತ್ತಲೇ 12-14 ಧಾರಾವಾಹಿಗಳಲ್ಲಿ ನಟಿಸಿದೆ, ಪಾತ್ರಗಳಿಗೆ ಆದಷ್ಟು ಜೀವ ತುಂಬುವ ಪ್ರಯತ್ನ ಮಾಡಿದೆ. ಆದರೆ…. ಕ್ಷಮಿಸಿ ಮನಃಪೂರ್ವಕ ಅಭಿನಯಿಸಿದೆ ಎನ್ನುವ ಧೈರ್ಯವಿಲ್ಲ ನನಗೆ! ಆ ಮಟ್ಟಿಗೆ ನನ್ನಿಂದ ಆಯಾ ಪಾತ್ರಗಳಿಗೆ ಅಷ್ಟಷ್ಟು ಅನ್ಯಾಯವಾಯಿತೆಂದೇ ಹೇಳಬೇಕು. ಆದರೆ ಧಾರಾವಾಹಿಗಳನ್ನು ನೋಡುತ್ತಿದ್ದ ವೀಕ್ಷಕರು ಎದುರಾದಾಗ, “ನೀವೆಷ್ಟು ಒಳ್ಳೇವ್ರುರೀ!” ಎನ್ನುತಿದ್ದರು!! ನೀವು ಅಂದ್ರೆ ನಾನಲ್ಲ, ಆ ಪಾತ್ರ.
ನನ್ನೆಲ್ಲ ದೂರುಗಳನ್ನು ತೊಡೆದು ಹಾಕಲೇಂದೇ ಮಂಗಳತ್ತೆಯ ಪಾತ್ರ ನನ್ನನ್ನರಸಿ ಬಂದಾಗಲೂ ಅಂಥ ಸಂಭ್ರಮವಾಗಲಿಲ್ಲ ನನಗೆ. ಆದರೆ ನಾನು ಅಭಿನಯಿಸಿದ ಮೊದಲನೆಯ ದೃಶ್ಯದಲ್ಲೇ ನಿರ್ದೇಶಕರ ಆಣತಿ ಕೇಳಿ ಎಂಥದೊ ಆಶಾಕಿರಣ ಮನದ ಮೂಲೆಯನ್ನು ಬೆಳಗಿಸಿತು! ಅದೇನೆಂದರೆ, “ ಧ್ವನಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇಂತಿಷ್ಟು ಕಂಟ್ರೋಲ್ ಬೇಕೇ ಬೇಕು!”
ಇದುವರೆಗು ಮಾಡಿದ ಪಾತ್ರಗಳಿಂತ ಈ ಪಾತ್ರ ಭಿನ್ನವಾಗಿದೆ ಎಂದೆನಿಸಿ ಖುಷಿಯಾದರೂ again ತುಂಬಾ ಛಾಲೇಂಜಿಂಗ್ ಅಂತ ಅನ್ನಿಸುತ್ತಲೇ ಇಲ್ಲ!!  ಅಥವಾ ನನಗೇ ಛಾಲೇಂಜ್ ಅನ್ನುವುದರ ಅರ್ಥ ಸರಿಯಾಗಿ ಗೊತ್ತಿಲ್ಲವೇನೊ… ಛಾಲೇಂಜ್ ಅಂದ್ರೆ ಅದು ಹೇಗಿರುತ್ತೊ ಏನೊ, ಅದಕ್ಕಾಗಿ ಎದುರು ಕಾಯ್ತಿದೀನಿ. ಅಹಂಕಾರ ಅನ್ಕೋಬೇಡಿ ದಯವಿಟ್ಟು, ಇದು ಹಪಹಪಿ.
    ಮಂಗಳತ್ತೆಯ ಪಾತ್ರ ಕನ್ನಡಿಗರೆಲ್ಲರೂ ನನ್ನನ್ನು ಗುರುತಿಸುವಂತೆ, ಮೆಚ್ಚಿ ಆಶೀರ್ವದಿಸುವಂತೆ ಮಾಡಿತು. ನಿಮ್ಮೆಲ್ಲರಿಗೆ ಕೃತಜ್ಞೆ ನಾನು. ನನ್ನೊಳಗಿನ ಕಲಾವಿದೆ ಈಗ ಸ್ವಲ್ಪ, ಸ್ವಲ್ಪ ಮಾತ್ರವೇ ಪ್ರಸನ್ನೆ. ಜೊತೆಗೆ ನನ್ನ ವಯಸ್ಸಿಗೆ ಮೀರಿದ ಪಾತ್ರಗಳನ್ನ ನಾನು ಮಾಡ್ತಿದೀನಿ ಅನ್ನುವ ಕೊರಗು ಕಡಿಮೆಯಾಗಿ ಸ್ಥಿತಪ್ರಜ್ಞಳಾಗಿದೀನಿ. ಎಂಥಾ ಸ್ಥಿತಪ್ರಜ್ಞತೆ ಎಂದರೆ ನನ್ನ ಮುಂಬರುವ ಧಾರಾವಾಹಿಯಲ್ಲಿ ನೀವು ನನ್ನನ್ನು ಅಜ್ಜಿಯಾಗಿ ನೋಡಲಿದ್ದೀರಿ! ಸತ್ಯವಾಗ್ಲೂ!
“ನಿಜಕ್ಕೂ ನಿನ್ನದು ಸ್ಥಿತಪ್ರಜ್ಞೆಯೇ ಜಯಲಕ್ಷ್ಮೀ? ಜನರೆದುರಿಗೆ ಸುಳ್ ಹೇಳಬೇಡ್ವೆ ಸುಮ್ನಿರು!”
ಮನಸಿಗೆ ನಾನು ಗದರಿಸ್ತಾ ಇರೋದು ನಿಮಗೆ ಕೇಳಿಸ್ಲಿಲ್ಲ ತಾನೆ...?
                                                      - ಜಯಲಕ್ಷ್ಮೀ ಪಾಟೀಲ್.

Monday, November 29, 2010

ಬಣ್ಣದ ಬದುಕು

ನಮಸ್ಕಾರ.
    ಬಣ್ಣದ ಬದುಕಿನ ಕುರಿತು ಬರೆಯಬೇಕೆಂದಿದ್ದೇನೆ . ಒಂದಿಷ್ಟು ಮಾತು, ಒಂದಿಷ್ಟು ಛಾಯಾಚಿತ್ರಗಳು ಮತ್ತೊಂದಿಷ್ಟು ವಿಡಿಯೊಗಳು... ಹೀಗೆ ಕ್ರಮಿಸುವುದು ಎಂದುಕೊಂಡಿದ್ದೇನೆ. ಕೇಳಲು ನೀವುಗಳು ಎಂದಿನಂತೆ ನನ್ನೊಂದಿಗಿದ್ದೀರೆಂಬ ಭರವಸೆಯಲ್ಲಿ.