Monday, October 1, 2012

ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ - ಸಾಕ್ಷ್ಯಚಿತ್ರ, ‘ಬಿ.ವಿ ಕಾರಂತ (ಬಾಬಾ)

ಬಿ.ವಿ.ಕಾರಂತ




ಅಂದು ಸೆಪ್ಟಂಬರ್ 1, 2002, ಮುಂಬೈನ ಕರ್ನಾಟಕ ಸಂಘದಲ್ಲಿ ‘ಮಹಾಮಾಯಿ ನಾಟಕದ ರಿಹರ್ಸಲ್‌ನಲ್ಲಿದ್ದೆ. ನಾಟಕದ ನಿರ್ದೇಶಕರು, ಬಿ.ವಿ. ಕಾರಂತರು ಇನ್ನಿಲ್ಲ ಎಂಬ ಸಿಡಿಲಿನ ಸುದ್ದಿ ತಿಳಿಸಿದರು. ಒಮ್ಮೆಯಾದರೂ ಕಾರಂತರನ್ನು ನೋಡಬೇಕು, "ನಿಮ್ಮ ನಾಟಕದಲ್ಲಿ ಪುಟ್ಟದಾದರೂ ಪರವಾಗಿಲ್ಲ ನನಗೊಂದು ಪಾತ್ರ ಕೊಡಿ"  ಎಂದು ಅವರಲ್ಲಿ ಕೇಳಿಕೊಂಡು ಅವರ ನಾಟಕದಲ್ಲಿ ಅಭಿನಯಿಸಬೇಕು ಎಂದು ಕಂಡ ಕನಸು, ನನಸು ಮಾಡಿಕೊಳ್ಳುವ ಮುನ್ನವೇ ಕರಗಿ ಹೋಗಿತ್ತು... ಮುಂದೆ ಬೆಂಗಳೂರಿಗೆ ಬಂದ ಮೇಲೆ ಕಾರಂತರು ನಿರ್ದೇಶಿಸಿದ್ದ ಮೂರು ನಾಟಕಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಎರಡು ದಿನಗಳ ಕಾಲ ಕಾರಂತರ ಮನೆಯಲ್ಲಿ ನಾಟಕವೊಂದರ ರಿಹರ್ಸಲ್ ಮಾಡಿ,  ಪ್ರೇಮಾ ಕಾರಂತರೊಂದಿಗೆ, ಕಾರಂತರ ನಾಯಿ ‘ನಿಂಜ’ನೊಂದಿಗೆ ಒಡನಾಡಿ ಅಷ್ಟರ ಮಟ್ಟಿಗೆ ಧನ್ಯತೆ ಅನುಭವಿಸಿದೆ. ವೈದೇಹಿಯವರ ಬರಹದಲ್ಲಿ ಮೂಡಿ ಬಂದ ಕಾರಂತರ ಆತ್ಮಕಥನ  ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಓದಿ ಕಾರಂತರನ್ನು ಇನ್ನಷ್ಟು ತಿಳಿದುಕೊಂಡೆ ಎಂದು ಸಮಾಧಾನ ಪಟ್ಟುಕೊಂಡೆ.
ನಿರ್ದೇಶಕ ರಾಮಚಂದ್ರ ಪಿ.ಎನ್
    ಈಗ, ತಮ್ಮ ತುಳು ಚಿತ್ರ ‘ಸುದ್ದಕ್ಕೆ  ೨೦೦೬ರ ‘ಓಶಿಯನ್ ಸಿನಿಫ್ಯಾನ್ ಫೆಸ್ಟಿವಲ್ ಆಫ್ ಏಶಿಯನ್ ಫಿಲ್ಮ್ಸ್ನಲ್ಲಿ ‘ಬೆಸ್ಟ್ ಇಂಡಿಯನ್ ಫಿಲ್ಮ್’ ಪ್ರಶಸ್ತಿ ಹಾಗೂ ೨೦೦೯ರಲ್ಲಿ ‘ಪುಟಾಣಿ ಪಾರ್ಟಿ’ ಎಂಬ ಕನ್ನಡ ಮಕ್ಕಳಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಪಡೆದ ನಿರ್ದೇಶಕ ರಾಮಚಂದ್ರ ಪಿ.ಎನ್ ಅವರು ನಿರ್ದೇಶಿಸಿದ ‘ ಬಿ ವಿ ಕಾರಂತ (ಬಾಬಾ’ ಚಿತ್ರ ನೋಡಿದ ಮೇಲೆ ನನಗೆ ಗೊತ್ತಿದೆ ಅಂದುಕೊಂಡಿದ್ದು ತುಂಬಾ ಕಡಿಮೆ ಇತ್ತು ಎಂದರಿವಾಯಿತು, ನನಗಷ್ಟೇ ಅಲ್ಲ, ಕಾರಂತರನ್ನು ಬಲ್ಲೆ ಎನ್ನುವವರಿಗೂ ಈ ಸಾಕ್ಷ್ಯಚಿತ್ರವನ್ನು ನೋಡಿದ ಮೇಲೆ ಇದೇ ಅನುಭವವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

  ಈ ಚಿತ್ರದ ಹೆಗ್ಗಳಿಕೆ ಎಂದರೆ ಥೇಟ್ ಕಾರಂತರ ಧಾಟಿಯಲ್ಲೇ ಅಂದರೆ ಕಾರಂತರು ಹೇಗೆ ಪ್ರಕೃತಿದತ್ತವಾದ, ಸಹಜವಾದ ಧ್ವನಿಗಳನ್ನು ಸಂಗೀತವಾಗಿಸಿಕೊಂಡು, ದಿನನಿತ್ಯದ ಬಳಕೆಯ ವಸ್ತುಗಳನ್ನು ವಾದ್ಯವಾಗಿಸಿಕೊಂಡು, ವಾದ್ಯಪರಿಕರಗಳೊಡನೆ ಮೇಳೈಸಿ ರಂಗಗೀತೆಗಳಿಗೆ ಹೊಸ ಆಯಾಮ ಕೊಟ್ಟರೋ, ದೇಸಿ ಸೊಗಡನ್ನು ಶೆಕ್ಸ್‌ಪಿಯರ್‌ನ ನಾಟಕಗಳಿಗೆ ಅಳವಡಿಸಿ ಅನ್ಯ ಸಂಸ್ಕೃತಿಯನ್ನು ಆಪ್ತವಾಗಿಸಿದರೋ,  ಅದಕ್ಕೆ ತಕ್ಕುದಾಗಿ ನಿರ್ದೇಶಕ ರಾಮಚಂದ್ರ ಪಿ.ಎನ್ ಅವರು ಈ ಚಿತ್ರಕ್ಕೆ ತೀರ ಅನಿವಾರ್ಯವಾದಷ್ಟೇ ಕೃತ್ರಿಮ ಬೆಳಕಿನೊಡನೆ ಆದಷ್ಟು ಸಹಜ ಬೆಳಕನ್ನು ಬಳಸಿಕೊಂಡು ಚಿತ್ರೀಕರಿಸಿ, ರೂಪಕದ ರೀತಿಯಲ್ಲಿಯ ದೃಶ್ಯ ಸಂಯೋಜಿಸಿ, ಅಲ್ಲಲ್ಲಿ ಕಾರಂತರ ಸಂಗೀತ ಸಂಯೋಜನೆಯ ಹಾಡುಗಳನ್ನು ಬಳಸಿ ಪಕ್ಕಾ ಕಾರಂತ ಚಿತ್ರವಾಗಿಸಿದ್ದಾರೆ. ರಾಮಚಂದ್ರ ಪಿ.ಎನ್ ಅವರ ಈ ಚಿತ್ರಕ್ಕೂ ಸಮೀರ್ ಮಹಜನ್ ಅವರ ಛಾಯಾಗ್ರಹಣವಿದೆ.

 ರಂಗಮಂಚದ ಬೆಳಕಿನ ಸಂಯೋಜನೆಯ ದೃಶ್ಯದೊಂದಿಗೆ ತೆರೆದುಕೊಳ್ಳುವ ಈ ಸಿನಿಮಾ, ವೈದೇಹಿಯವರು ರಚಿಸಿದ ಕಾರಂತರ ಬದುಕಿನ ಬರಹ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ಯನ್ನು ಆಧರಿಸಿದ್ದರೂ ಸಹ ಕಾರಂತರ ಅನೇಕ ಒಡನಾಡಿಗಳ, ಆಪ್ತರ, ಮನೆಯ ಜನರ, ಶಿಷ್ಯರ ಮಾತಿನ ಮುಖಾಂತರ, ಕಾರಂತರ ಬದುಕನ್ನು ಅನಾವರಣಗೊಳಿಸುತ್ತಾ, ಕಾರಂತರು ಸಂಚರಿಸಿ ಸಂಚಲನವನ್ನುಂಟು ಮಾಡಿದ ಪ್ರದೇಶಗಳಿಗೆಲ್ಲ ಭೇಟಿ ನೀಡುತ್ತಾ ಅಲ್ಲಿ ಉಳಿದು ಬೆಳೆಯುತ್ತಿರುವ ಕಾರಂತರ ಛಾಪನ್ನು ನಮ್ಮ ಮನದಲ್ಲೂ ಅಳಿಯದಂತೆ ಅಚ್ಚು ಹಾಕುವಲ್ಲಿ ಸಿನಿಮಾ ಸಂಪೂರ್ಣ ಯಶಸ್ವಿಯಾಗುತ್ತದೆ.

ಹಿಂದಿಯ ಖ್ಯಾತ ನಾಟಕಕಾರ ಜಯಶಂಕರ್ ಪ್ರಸಾದ್ ಅವರ ನಾಟಕಗಳನ್ನು ಅವುಗಳ ಗಾತ್ರ ಹಾಗೂ ಅವುಗಳಲ್ಲಿನ ವಿವರಣಾಕ್ರಮದಿಂದಾಗಿ ಹಿಂದಿ ಭಾಷೆಯ ಜನರೇ ರಂಗಕ್ಕೆ ತರಲು ಹೆದರುತ್ತಿದ್ದಂಥ ವೇಳೆಯಲ್ಲಿ ಕಾರಂತರು ಅವುಗಳನ್ನು ಪ್ರಯೋಗಿಸಿದ್ದನ್ನು ನೆನಪಿಸಿಕೊಳ್ಳುವ ಕಾಶಿನಾಥ್ ಸಿಂಗ್,
‘ಚಾಣಕ್ಯ ನಾಟಕದಲ್ಲಿ ಚಾಣಕ್ಯನ ಪಾತ್ರವಹಿಸಲು ಘಟಾನುಘಟಿ ನಟರೆಲ್ಲ ಸಾಲಾಗಿ ಮುಂದಾದಾಗ ನಟನೇ ಅಲ್ಲ ಎನ್ನಿಸಿದ್ದ ನಟನೊಬ್ಬನಿಂದ ಆ ಪಾತ್ರ ಮಾಡಿಸಿ, ಇವನ ಹೊರತು ಅನ್ಯರು ಚಾಣಕ್ಯನ ಪಾತ್ರಕ್ಕೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದು ಜನ ಮಾತಾಡಿಕೊಳ್ಳುವಂತೆ ಆ ನಟನನ್ನು ಕಾರಂತರು ತಯಾರು ಮಾಡಿದನ್ನು ಮೆಲುಕು ಹಾಕುವ ಕುವರ್ಜಿ ಅಗರ್ವಾಲ್,
ಇರುವ ವಾದ್ಯಗಳನ್ನೇ ಬೇರೆ ರೀತಿಂiiಲ್ಲಿ ಪ್ರಯೋಗಿಸಲು ಆ ಮುಖಾಂತರ ಸಂಗೀತಕ್ಕೆ ಹೊಸತನವನ್ನು ನೀಡಿ ಅಚ್ಚರಿಮೂಡಿಸುತ್ತಿದ್ದ ಕಾರಂತರ ಕುರಿತು ಮಾತಾಡುವ ನೀಲಮ್ ಮಾನ್ ಸಿಂಗ್,
ಎನ್ ಎಸ್ ಡಿಯ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತಿದ್ದ ರೀತಿಯ ಕುರಿತು ಮಾತಾಡಿರುವ ಕೀರ್ತಿ ಜೈನ್, ಅನುರಾಧಾ ಕಪೂರ್,
ಇದ್ದ ಸ್ಥಳವನ್ನೇ ಕಾರಂತರು ನಾಟಕಕ್ಕೆ ಹೇಗೆ ಅನುಕೂಲ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ನೆನಪಿಸಿಕೊಳ್ಳುವ ಶ್ರೀನಿವಾಸ್ ಜಿ ಕಪ್ಪಣ್ಣ,
ಕಾರಂತರ ಸಿನಿಮಾ ನಂಟಿನ ಕುರಿತು ಮಾತಾಡಿದ ಗಿರೀಶ್ ಕಾರ್ನಾಡರು, ಕಾಸರವಳ್ಳಿಯವರು,
ತಮ್ಮ ಮೃದುದನಿಯಲ್ಲಿ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆಯ ಕೆಲವು ಪುಟಗಳನ್ನು ಓದುವ ವೈದೇಹಿ ಮತ್ತು ಅನೇಕ ಹಿರಿಕಿರಿಯ ರಂಗಕರ್ಮಿಗಳು...
ಹೀಗೆ ದೇಶದ ಉದ್ದಗಲಕ್ಕೂ ಸಂಚರಿಸಿ ಕಾರಂತರ ಒಡನಾಡಿಗಳನ್ನು ಮಾತಾಡಿಸಿ, ಆ ಮೂಲಕ ಕಾರಂತರನ್ನು ಪರಿಚಿಯಿಸುವುದು ಮತ್ತು ಚಿತ್ರೀಕರಿಸಿದ್ದನ್ನು ಕ್ರಮಬದ್ಧವಾಗಿ, ಅಚ್ಚುಕಟ್ಟಾಗಿ ಹೊಂದಿಸಿ ಪ್ರಸ್ತುತಪಡಿಸಿವುದರ ಹಿಂದಿನ ಪರಿಶ್ರಮದ ಸಾರ್ಥಕತೆ ಈ ಚಿತ್ರ ನೀಡುವ ಗಾಢ ಅನುಭವದಲ್ಲಿ ಕಂಡುಬರುತ್ತದೆ.
ಚಿತ್ರೀಕರಣದ ವೇಳೆಯಲ್ಲಿ ನಿರ್ದೇಶಕ ರಾಮಚಂದ್ರ ಪಿ.ಎನ್, ಛಾಯಾಗ್ರಾಹಕ ಸಮೀರ್ ಮಹಜನ್ ಮತ್ತು ರಂಗಕರ್ಮಿ ಇಕ್ಬಾಲ್ ಅಹೆಮದ್.
  ಕಣ್ಣೆದುರೇ ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ತನ್ನ ಆಸೆ, ಕನಸು, ದುಗುಡಗಳೊಡನೆ ಏರು ದಾರಿಯಲ್ಲಿ ನಡೆಯುತ್ತಾ ನಡೆಯುತ್ತಾ ಮೇರುಪರ್ವತವಾದ ಬೆರಗು, ಇನ್ನೊಬ್ಬ ಕಾರಂತ ಬೇಕು ಎಂಬ ತುರ್ತಿನ ಹಂಬಲ ಮನಸನ್ನು ಆವರಿಸಿಕೊಳ್ಳುತ್ತವೆ. ‘ಫಿಲ್ಮ್ ಡಿವಿಜನ್ನ ನಿರ್ಮಾಣದ, ೯೩ ನಿಮಿಷದ ಬಿ ವಿ ಕಾರಂತರ ಕುರಿತ ಈ ಸಾಕ್ಷ್ಯಚಿತ್ರ ‘ಬಿವಿ ಕಾರಂತ (ಬಾಬಾ), ಕೇವಲ ಕನ್ನಡಿಗರಿಗೆ ಕನ್ನಡ ರಂಗಭೂಮಿಗೆ ಮಾತ್ರವಲ್ಲ, ಇಡೀ ಭಾರತೀಯ ರಂಗಭೂಮಿಗೊಂದು ಉತ್ತಮ ಕೊಡುಗೆ.
ಈ ಅಪರೂಪದ ಚಿತ್ರವನ್ನು ನೋಡಬಯಸುವವರು ಫಿಲ್ಮ್ ಡಿವಿಜನ್ನ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

1) Officer in-charge of Distributiondho@filmsdivision.org
 Phone: 022-23512670

2) Nodal Officer
nodalofficerit@filmsdivision.org


ವೈದೇಹಿಯವರ ಬರಹದಲ್ಲಿ ಬಿ ವಿ ಕಾರಂತರ ಬದುಕು ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’

                                                                                                          -ಜಯಲಕ್ಷ್ಮೀ ಪಾಟೀಲ್.